ಹೊಸದಿಗಂತ ವರದಿ ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬಂಗಾರದ ಆಭರಣ ಕಳವು ಮಾಡಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 2.6 ಲಕ್ಷ ರೂ ಮೌಲ್ಯದ ಬಂಗಾರದ ಕರಿಮಣಿ ಸರವನ್ನು ವಶಕ್ಕೆ ಪಡೆಯಲಾಗಿದೆ.
ಕುಮಟಾ ಬಡಾಳದ ಸೊಪ್ಪಿನ ಹೊನ್ನಳ್ಳಿಯಲ್ಲಿ ವಾಸವಾಗಿದ್ದ ಸೀಮಾಬಾನು ಜಾವೇದ್ ಸಾಬ್ (42) ಹಾಗೂ ಶಮ್ಮಾ ಬುಡಿಯಾ ಮಹಮ್ಮದ್ ಪಿರ್ದೋಸ್ (27) ಬಂಧಿತ ಆರೋಪಿಗಳು.
ಆಗಸ್ಟ್ 18ರಂದು ಮಧ್ಯಾಹ್ನ 1.45ರಿಂದ 2 ಗಂಟೆಯ ನಡುವಿನ ಅವಧಿಯಲ್ಲಿ ಚಿಕ್ಕೊಳ್ಳಿ ನಿವಾಸಿ ಭಾರತಿ ಶಿವು ನಾಯಕ ಅವರು ಕುಮಟಾದ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದ ಕಡೆ ತೆರಳಲು ಬಸ್ ಹತ್ತುತ್ತಿದ್ದ ವೇಳೆ, ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಬಂಗಾರದ ಆಭರಣವಿದ್ದ ಚಿಕ್ಕ ಪರ್ಸ್ ಕಳವು ಮಾಡಲಾಗಿತ್ತು. ಪರ್ಸ್‌ನಲ್ಲಿ ಸುಮಾರು 16 ಗ್ರಾಂ ತೂಕದ ಮಾಂಗಲ್ಯ ಸರ ಇತ್ತು. ಈ ಕುರಿತು ಆಗಸ್ಟ್ 19ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ:
ಕುಮಟಾ ಬಸ್ ನಿಲ್ದಾಣದಲ್ಲಿ ಈ ಹಿಂದೆಯೂ ಕಿಸೆಗಳ್ಳತನದ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಕ್ರೈಂ ಬ್ರಾಂಚ್ ತಂಡವು ಹಲವು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಇಬ್ಬರು ಮಹಿಳೆಯರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಈ ವೇಳೆ ಆರೋಪಿತರಿಂದ ಕಳವು ಮಾಡಲಾಗಿದ್ದ ಬಂಗಾರದ ಕರಿಮಣಿ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಡಿವೈಎಸ್‌ಪಿ ಗಿರೀಶ್ ಬಿ. ಅವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ್ ಅವರ ನೇತೃತ್ವದಲ್ಲಿ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಕುಮಟಾ ಬಸ್ ನಿಲ್ದಾಣದಲ್ಲಿ ಕಿಸೆಗಳ್ಳತನ, ಮೊಬೈಲ್ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಂಧಿತ ಆರೋಪಿಗಳಿಗೆ ಇನ್ನಷ್ಟು ಮಂದಿ ಸಂಪರ್ಕ ಹೊಂದಿರುವ ಸಾಧ್ಯತೆಯಿದ್ದು, ಈ ಕುರಿತು ಪೊಲೀಸರು ಸಮಗ್ರ ವಿಚಾರಣೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



