ಹೊಸದಿಗಂತ ವರದಿ ತುಮಕೂರು:
ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಆಟೋ ಚಾಲಕರೊಬ್ಬರು ವಾರಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಹನುಮಂತಪುರ ನಿವಾಸಿ ರವಿಕುಮಾರ್ ಎಂಬುವರೇ ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.
ಗಾಯತ್ರಿ ಎನ್ನುವವರು ಕುಂದೂರು ಗ್ರಾಮದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದರು. ಸೀಮಂತ ಮುಗಿದ ಮೇಲೆ ಸಂಬಂಧಿಕರ ಜೊತೆ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಆಟೋದಿಂದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಮಹಿಳೆ ಆಭರಣಗಳು ಇರುವ ಬ್ಯಾಗ್ ಮರೆತು ಹೋಗಿದ್ದರು. ಬಳಿಕ ಸ್ವಲ್ಪ ದೂರ ಹೋದ ಮೇಲೆ ನೆನಪು ಮಾಡಿಕೊಂಡು ವಾಪಸ್ ಬಂದು ಆಟೋಗಾಗಿ ಹುಡುಕಾಡಿದ್ದಾರೆ. ಇತ್ತ ಆಟೋ ಚಾಲಕ ಕೂಡ ಆಕೆಗಾಗಿ ಹುಡುಕಾಡಿದ್ದಾರೆ.
ಆಟೋ ಸಿಗದಿದ್ದಕ್ಕೆ ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಇತ್ತ ಚಾಲಕ ಕೂಡ ಮಹಿಳೆ ಕಾಣದಿದ್ದಕ್ಕೆ ಬ್ಯಾಗ್ ವಾಪಸ್ ಕೊಡಬೇಕು ಎಂದು ಪೊಲೀಸ್ ಠಾಣೆಗೆ ಬಂದಿದ್ದಾರೆ. ಠಾಣೆಯಲ್ಲಿ ಚಾಲಕನ್ನು ನೋಡಿದ ಮಹಿಳೆ ಫುಲ್ ಖುಷಿಯಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಬ್ಯಾಗ್‍ನಲ್ಲಿ ಸುಮಾರು 4 ಲಕ್ಷ ರೂಪಾಯಿಯ ಬೆಲೆ ಬಾಳುವ 52 ಗ್ರಾಂ ನಷ್ಟು ಚಿನ್ನಾಭರಣ ತಮ್ಮ ಕೈಸೇರಿದ್ದಕ್ಕೆ ಗಾಯತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.