ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಮೂಲ್ಯ ಚಿನ್ನದ ಕಿರೀಟವೊಂದು ನಾಪತ್ತೆಯಾಗಿದೆ ಎಂಬ ವರದಿಗಳು ಸಂಚಲನ ಮೂಡಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ಕಿರೀಟ ನಾಪತ್ತೆಯಾಗಿಲ್ಲ ಮತ್ತು ಸುರಕ್ಷಿತವಾಗಿಯೇ ಆರಣ್ಮುಳದಲ್ಲಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಕಿರೀಟದ ಕುರಿತು ಆರಂಭಿಕ ವರದಿಗಳು ಹಾಗೂ ನಂತರದ ಸ್ಪಷ್ಟೀಕರಣದ ನಡುವೆ ಗೊಂದಲ ಉಂಟಾಗಿದೆ.
445.78 ಗ್ರಾಂ ತೂಕದ ಕಿರೀಟ
2012ರ ಆಗಸ್ಟ್‌ನಲ್ಲಿ ತಮಿಳುನಾಡಿನ ಕೆಲವು ಭಕ್ತರು ಶ್ರೀ ಅಯ್ಯಪ್ಪನಿಗೆ ಈ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದರು. ದಾಖಲೆಗಳ ಪ್ರಕಾರ ಕಿರೀಟದ ಒಟ್ಟು ತೂಕ 445.78 ಗ್ರಾಂ ಅಥವಾ ಸುಮಾರು 55.72 ಪವನ್ ಆಗಿತ್ತು. ಅಮೂಲ್ಯ ಹರಳುಗಳಿಂದ ಅಲಂಕರಿಸಲಾಗಿದ್ದ ಈ ಕಿರೀಟವನ್ನು ಅಯ್ಯಪ್ಪನ ವಿಗ್ರಹಕ್ಕೆ ಧರಿಸಿದ ಬಳಿಕ ಸುರಕ್ಷಿತ ಸಂಗ್ರಹಣೆಗೆ ಸ್ಥಳಾಂತರಿಸಲಾಗಿತ್ತು.
ಇತ್ತೀಚೆಗೆ ಕೇರಳ ಹೈಕೋರ್ಟ್‌ನ ನಿರ್ದೇಶನದ ಹಿನ್ನೆಲೆಯಲ್ಲಿ ಅಮಿಕಸ್ ಕ್ಯೂರಿ ನ್ಯಾಯಮೂರ್ತಿ ಕೆ.ಟಿ. ಶಂಕರನ್ ನೇತೃತ್ವದಲ್ಲಿ ಶಬರಿಮಲೆಯ ತಿರುವಾಭರಣಗಳ ಪರಿಶೀಲನೆ ಮತ್ತು ದಾಸ್ತಾನು ತಪಾಸಣೆ ನಡೆಯುತ್ತಿದೆ. ಈ ವೇಳೆ ಕಿರೀಟದ ದಾಖಲೆ ಹಾಗೂ ಅದರ ಸಂಗ್ರಹಣೆಯ ಕುರಿತು ಪರಿಶೀಲನೆ ನಡೆದಿದ್ದು, ಆರಂಭದಲ್ಲಿ ನಾಪತ್ತೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಕೆಲವು ವರದಿಗಳಲ್ಲಿ 240 ಗ್ರಾಂ ತೂಕದ ಬೇರೊಂದು ಕಿರೀಟ ಪತ್ತೆಯಾಗಿದೆ ಎಂಬ ಮಾಹಿತಿಯೂ ಪ್ರಕಟವಾಗಿತ್ತು.
ಇದನ್ನೂ ಓದಿ:
ಕಿರೀಟದ ಜೊತೆ ಚಿನ್ನದ ಸರವೂ ಕಾಣೆ
ಇದೇ ಪರಿಶೀಲನೆಯ ವೇಳೆ ಆರಣ್ಮುಳದ ಸ್ಟ್ರಾಂಗ್‌ರೂಮ್‌ನಲ್ಲಿದ್ದ ನಾಲ್ಕು ಪವನ್ ತೂಕದ ಚಿನ್ನದ ಸರವೂ ಕಾಣೆಯಾಗಿರುವ ಕುರಿತು ವರದಿಯಾಗಿದೆ. ದೇಗುಲದಲ್ಲಿ ದೊರೆಯುವ ಹೆಚ್ಚಿನ ಮೌಲ್ಯದ ಕಾಣಿಕೆಗಳನ್ನು ದಾಖಲೆಗಳಲ್ಲಿ ನಮೂದಿಸಿ, ನಿಯಮಾನುಸಾರ ಸುರಕ್ಷಿತ ಸಂಗ್ರಹಣೆಗೆ ಸ್ಥಳಾಂತರಿಸುವ ವ್ಯವಸ್ಥೆ ಇದೆ. ಹೀಗಾಗಿ ಆಭರಣಗಳ ದಾಖಲೆ, ಸಂಗ್ರಹಣೆ ಹಾಗೂ ಹಸ್ತಾಂತರ ಪ್ರಕ್ರಿಯೆಗಳ ಕುರಿತು ಪರಿಶೀಲನೆ ನಡೆಯುತ್ತಿದೆ.
ಕಿರೀಟ ನಾಪತ್ತೆಯಾಗಿದೆ ಎಂಬ ಸುದ್ದಿ ಮಾಧ್ಯಮಗಳ ಮೂಲಕ ತಿಳಿದುಬಂದಿತ್ತು ಎಂದು ಕೆ. ಜಯಕುಮಾರ್ ಹೇಳಿದ್ದು, ಇದೀಗ ಕಿರೀಟ ಸುರಕ್ಷಿತವಾಗಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾಸ್ತಾನು ಪರಿಶೀಲನೆಯ ಸಂಪೂರ್ಣ ವರದಿ ಹೊರಬಂದ ಬಳಿಕವಷ್ಟೇ ನಿಖರ ಚಿತ್ರಣ ಸಿಗುವ ಸಾಧ್ಯತೆಯಿದೆ.



