ಬಿ.ಎಲ್. ಸಂತೋಷ್ ಬಗ್ಗೆ ಕುಮಾರಸ್ವಾಮಿ ಲಘು ಹೇಳಿಕೆ ಖಂಡಿಸಿ ನಾಳೆ ʼಜೋಳಿಗೆʼ ಪ್ರತಿಭಟನೆ

ಹೊಸದಿಗಂತ ವರದಿ, ಮಂಡ್ಯ:
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ನಾಳೆ ಎಲ್ಲಾ ತಾಲೂಕುಗಳಲ್ಲೂ ಜೋಳಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜಿಪಿ ಮುಖಂಡ ಅಶೋಕ್ ಜಯರಾಂ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿ.ಎಲ್. ಸಂತೋಷ್ ಅವರ ಬಗ್ಗೆ ʼಜೋಳಿಗೆ ಹಿಡಿದು ಓಡಾಡಿದರೆ ಸಾಲದು, ಒಂದೇ ಒಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ಗೆಲ್ಲಲಿʼ ಎಂಬ ಕುಮಾರಸ್ವಾಮಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ಹಲವಾರು ಮಂದಿ ಅವರ ಪಕ್ಷದ ನಾಯಕರು ಪ್ರಾರಂಭದಲ್ಲಿ ಹರಕಲು ಪಂಚೆಯುಟ್ಟುಕೊಂಡೇ ಪಕ್ಷ ಕಟ್ಟಿದ್ದಾರೆ. ಇದನ್ನು ಮರೆತು ಜೋಳಿಗೆ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ತಾಂತ್ರಿಕ ಪದವಿ ಪಡೆದಿರುವ ಸಂತೋಷ್ ಅವರು ದೇಶದ ಬಗ್ಗೆ ಚಿಂತನೆ ಮಾಡುತ್ತಾರೆ. ಸಾಧು ಸಂತರ ರೀತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಒಂದು ವೇಳೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಕುಮಾರಸ್ವಾಮಿ ನೇಮಕಗೊಂಡಿದ್ದರೆ ಝಡ್ ಪ್ಲೆಸ್ ಭದ್ರತೆ ಪಡೆದು ಸ್ಟಾರ್ ಹೊಟೇಲ್‌ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಸಂತೋಷ್ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುತ್ತಿದ್ದಾರೆ. ಇಂತಹ ಮಹನೀಯರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು ಎಂದು ಎಚ್ಚರಿಕೆ ನೀಡಿದರು.
ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಲು ಬಿ.ಎಸ್. ಯಡಿಯೂರಪ್ಪ ಅವರ ಪಾತ್ರ ಎಷ್ಟು ಮುಖ್ಯವೋ ಅದೇ ರೀತಿ ಬಿ.ಎಲ್. ಸಂತೋಷ್‌ರವರದ್ದು ಸಹ ಅಷ್ಟೇ ಮುಖ್ಯವಾದದ್ದು. ಇಂತಹ ವ್ಯಕ್ತಿಯ ಬಗ್ಗೆ ಜೋಳಿಗೆ ಹಿಡಿದು ಹೋಗುವವರು ಎಂದು ಹೇಳಿರುವ ಕಾರಣ ನಾಳೆ ಜೋಳಿಗೆ ಹಿಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಮಾತನಾಡಿ, ಪಂಚರತ್ನ ರಥಯಾತ್ರೆ ಮೂಲಕ ಮತ್ತೊಂದು ಕಣ್ಣೀರ ಕಥೆಯನ್ನು ಹೇಳಲು ಹೊರಟಿದ್ದಾರೆ. ಇದನ್ನು ನಂಬುವವರು ಯಾರೂ ಇಲ್ಲ, ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನೇ ಈಡೇರಿಸದ ಕುಮಾರಸ್ವಾಮಿ ಅವರು ಈಗ ಪಂಚರತ್ನ ರಥಯಾತ್ರೆ ಮಾಡಿ ಹೊಸ ಬರವಸೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಸಾಲು ಸಾಲು ಭರವಸೆಗಳು ಏನಾದವು, ನಿಮ್ಮ ಮಗನನ್ನು ಮಂಡ್ಯದ ಜನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ನೀವು ನೀಡಿದ್ದ ಎಲ್ಲಾ ಭರವಸೆ, ಘೋಷಣೆಗಳೆಲ್ಲವನ್ನೂ ವಾಪಸ್ಸು ಪಡೆದದ್ದು ಮರೆತುಹೋಗಿದೆ ಎಂದು ಛೇಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ನಾ. ಸುರೇಶ್, ನಗರಾಧ್ಯಕ್ಷ ವಿವೇಕ್, ನಗರಸಭಾ ಸದಸ್ಯ ಶಿವಕುಮಾರ್, ಸಾಮಾಜಿಕ ಜಾಲ ತಾಣದ ವಿನೋದ್ ಗೋಷ್ಠಿಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!