ಚೀನಾದ ಹೊಸ ಕೋವಿಡ್ ಅಲೆಗೆ ಭಾರತ ಆತಂಕಪಡಬೇಕೆ? -ಏಮ್ಸ್‌ ಮಾಜಿ ನಿರ್ದೇಶಕ ಗುಲೇರಿಯಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದಲ್ಲಿ ಏರುತ್ತಿರುವ ಕೋವಿಡ್‌ ಪ್ರಕರಣಗಳು ಹೊಸ ರೂಪಾಂತರಿಯ ಭೀತಿ ಸೃಷ್ಟಿಸಿದೆ. ಚೀನಾವು ಕೋವಿಡ್‌ ನಿರ್ಬಂಧಗಳನ್ನು ತೆಗೆದು ಹಾಕಿರುವುದರಿಂದ ಇದು ಇತರ ದೇಶಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಈ ನಿಟ್ಟಿನಲ್ಲಿ ಭಾರತವೂ ಕೂಡ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಕೇಂದ್ರ ಆರೋಗ್ಯ ಸಚಿವರು ಎಲ್ಲ ರಾಜ್ಯಗಳ ಸಭೆ ಕರೆದಿದ್ದಾರೆ. ದೇಶದಲ್ಲಿ ಮತ್ತೆ ಕೋವಿಡ್‌ ಭೀತಿ ಎದುರಾಗುವ ಕುರಿತು ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗುವ ಸಂಭವವಿದೆ. ಆದರೆ ಈ ಕುರಿತು ಭಯಪಡುವ ಅಗತ್ಯವಿಲ್ಲ, ನಮ್ಮಲ್ಲಿ ರೋಗ ನಿರೋಧಕ ಶಕ್ತಿ ದೃಢವಾಗಿದೆ  ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)‌ ನ ಮಾಜಿ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಹಿಂದುಸ್ತಾನ್‌ ಟೈಮ್ಸ್‌ ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವರ ಮಾತಿನ ಮುಖ್ಯಾಂಶಗಳು ಇಲ್ಲಿವೆ.

  • ಕಳೆದ ವರ್ಷ ಚೀನಾ, ಇಟಲಿಗಳಲ್ಲಿನ ಪರಿಸ್ಥಿತಿಗಳನ್ನು ಗಮನಿಸಿ ನಾವು ಮುನ್ನೆಚ್ಚರಿಕೆಯಾಗಿ ಎಲ್ಲ ರೀತಿಯಿಂದಲೂ ಸಜ್ಜಾಗಿದ್ದೇವೆ. ಹಿಂದಿನ ಲಾಕ್‌ ಡೌನ್‌ ಸಂದರ್ಭದಲ್ಲಿ ವಿಜ್ಞಾನಿಗಳು, ವೈದ್ಯರು ಮತ್ತು ನೀತಿ ನಿರೂಪಕರ ನಡುವೆ ಹೊಂದಾಣಿಕೆ ಸಾಧಿಸಿ ಅಗತ್ಯ ಬದಲಾವಣೆ ಹಾಗೂ ಮೂಲ ಸೌಕರ್ಯಾಭಿವೃದ್ಧಿ ಮಾಡಲಾಗಿದೆ.
  • ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಾವು ಸಾಕಷ್ಟು ಸಿದ್ಧವಾಗಿದ್ದೇವೆ.
  • ಈ ಹಿಂದೆ ಸಾಂಕ್ರಾಮಿಕವು ಆವರಿಸಿಕೊಂಡಾಗ ನಮ್ಮಲ್ಲಿ ಕೋವಿಡ್‌ ವೈರಸ್‌ ವಿರುದ್ಧ ರೋಗ ನಿರೋಧಕ ಶಕ್ತಿ ಕಡಿಮೆಯಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಸಾಂಕ್ರಾಮಿಕದ ಮೂರುವರ್ಷದ ನಂತರ ಜನರು ಹಲವಾರು ಬಾರಿ ಸೋಂಕಿಗೆ ತುತ್ತಾಗಿದ್ದು ವೈರಸ್‌ ಬಗ್ಗೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ.
  • ಅಲ್ಲದೇ ಅನೇಕ ನೈಸರ್ಗಿಕ ಸೋಂಕುಗಳಿಂದಲೂ ಜನರು ಗುಣಮುಖರಾಗಿರುವುದರಿಂದ ನಮ್ಮ ರೋಗನಿರೋಧಕತೆ ದೃಢವಾಗಿದೆ. ಅದು ನಮ್ಮ ಮೇಲೆ ವೈರಸ್ ತೀವ್ರವಾಗಿ ದಾಳಿ ಮಾಡಲು ಬಿಡುವುದಿಲ್ಲ
  • ಲಸಿಕೆಗಳ ಲಭ್ಯತೆ ಮತ್ತು ವ್ಯಾಪ್ತಿಯೂ ಸಹ ಸಾಕಷ್ಟು ಹೆಚ್ಚಿದೆ.‌
  • ಈ ಹಿಂದೆ ನಾವು ಅಲ್ಫಾ, ಬೀಟಾ, ಡೆಲ್ಟಾ ರೂಪಾಂತರಿಗಳನ್ನು ನೋಡಿದ್ದೇವೆ. ಆದರೆ ಕಳೆದ ಒಂದು ವರ್ಷದಿಂದ ಒಮಿಕ್ರಾನ್ ರೂಪಾಂತರಿಗಳು ಮಾತ್ರ ಕಂಡು ಬಂದಿವೆ. ಅವುಗಳನ್ನೂ ಕೂಡ ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಿದ್ದೇವೆ. ಅದರ ನಂತರ ಹೆಚ್ಚು ತೀವ್ರವಾಗಿರುವ ಯಾವುದೇ ರೂಪಾಂತರಿ ಕಂಡು ಬಂದಿಲ್ಲ.
  • ವೈರಸ್ ಸ್ವಲ್ಪ ಹೆಚ್ಚು ಸ್ಥಿರ ಮತ್ತು ಸೌಮ್ಯವಾಗಿ ಮಾರ್ಪಟ್ಟಿದೆ ಎಂದು ತೋರುತ್ತದೆ. ಆದರೆ ನಾವು ಎಚ್ಚರಿಕೆಯಿಂದಿರಬೇಕು. ಹೊಸ ವೈರಸ್‌ ಹೇಗೆ ವರ್ತಿಸುತ್ತದೆ ಎಂದು ತಿಳಿದಿಲ್ಲವಾದ್ದರಿಂದ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!