ಡ್ರಗ್‌ ನಶೆಯಲ್ಲಿ ತನ್ನ ಇಡೀ ಕುಟುಂಬವನ್ನು ಭೀಕರವಾಗಿ ಕೊಂದುಹಾಕಿದ ಮಾದಕ ವ್ಯಸನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಾದಕ ವ್ಯಸನಿಯೊಬ್ಬ ಪುನರ್ವಸತಿ ಕೇಂದ್ರದಿಂದ ವಾಪಸಾದ ಕೆಲವೇ ದಿನಗಳಲ್ಲಿ ತನ್ನ ಇಡೀ ಕುಟುಂಬವನ್ನು ಕೊಂಡುಹಾಕಿದ್ದು, ಈ ಭೀಕರ ಹತ್ಯೆ ದೆಹಲಿಯನ್ನು ಬೆಚ್ಚಿಬೀಳಿಸಿದೆ.
ಮನೆಯ ಕಲಹದ ಹಿನ್ನೆಲೆಯಲ್ಲಿ ಆರೋಪಿ ಕೇಶವ್ (25) ತನ್ನಿಡೀ ಕುಟುಂಬವನ್ನು ಹತ್ಯೆಗೈದಿದ್ದಾನೆ. ಆತ ತನ್ನ ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಸಂತ್ರಸ್ತರ ಶವಗಳು ಅವರ ಪಾಲಂ ಮನೆಯಲ್ಲಿ ರಕ್ತದ ಕಲೆಗಳೊಂದಿಗೆ ಪತ್ತೆಯಾದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಕೇಶವ್ ನನ್ನು ಬಂಧಿಸಿದ್ದಾರೆ. ಆತ ತನ್ನ ಕುಟುಂಬಸ್ಥರ ಕತ್ತು ಸೀಳಲು ತೀಕ್ಷ್ಣವಾದ ವಸ್ತುವನ್ನು ಬಳಸಿದ್ದಾನೆ. ಜೊತೆಗೆ ಅನೇಕ ಬಾರಿ ಇರಿದಿದ್ದಾರೆ ಎಂದು ಪೊಲೀಸರು ಭೀಕರ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ದೀಪಾವಳಿಯ ಬಳಿಕ ನಿರುದ್ಯೋಗಿಯಾಗಿದ್ದ ಆರೋಪಿ, ಮಾದಕ ವಸ್ತುಗಳ ಸೇವನೆಯ ತೀವ್ರ ದಾಸನಾಗಿದ್ದ. ಕೊಲೆ ಮಾಡುವಾಗ ಮಾದಕ ವಸ್ತುಗಳ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಆತನ ಅಜ್ಜಿ ದೀವಾನಾ ದೇವಿ (75), ತಂದೆ ದಿನೇಶ್ (50), ತಾಯಿ ದರ್ಶನಾ ಮತ್ತು ಸಹೋದರಿ ಊರ್ವಶಿ (18) ಎಂದು ಗುರುತಿಸಲಾಗಿದೆ.
ಆತನ ಹೆತ್ತವರ ಶವಗಳು ಸ್ನಾನಗೃಹದಲ್ಲಿ ಕಂಡುಬಂದರೆ, ಅವರ ಸಹೋದರಿ ಮತ್ತು ಅಜ್ಜಿಯ ದೇಹಗಳು ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ. ಈ ಸಂಗತಿ ಪತ್ತೆಯಾದಾಗ ಆರೋಪಿ ತನ್ನ ಮನೆಯಲ್ಲೇ ಇದ್ದು ತಪ್ಪಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದ, ಈ ವೇಳೆ ಆತನನ್ನು ಸಂಬಂಧಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!