ವೀಣಾ ಕಾಶಪ್ಪನವರ್‌ಗೆ ಹಿನ್ನಡೆ: ಯಾವುದೇ ಕಾರಣಕ್ಕೂ ಬಾಗಲಕೋಟೆ ಟಿಕೆಟ್ ಬದಲಾವಣೆ ಮಾಡಲ್ಲ ಎಂದ ಸಿಎಂ ಸಿದ್ದರಾಮಯ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್‌ ಹಾಗೂ ಅವರ ಬೆಂಬಲಿಗರು ಭಾರಿ ಹೋರಾಟ ನಡೆಸಿದ್ದರು.

ಈ ಕುರಿತು ಇಂದು ಮುಖ್ಯಮಂತ್ರಿ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ವೀಣಾ ಕಾಶಪ್ಪನವರ್ ಹಾಗೂ ಅವರ ಬೆಂಬಲಿಗರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರು.

ಆದ್ರೆ ಇದೀಗ ಯಾವುದೇ ಕಾರಣಕ್ಕೂ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಬದಲಾವಣೆ ಮಾಡಲ್ಲ ಎಂದು ವೀಣಾಕಾಶಪ್ಪನವರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಿದ್ದಾರೆ.

ವೀಣಾ ಕಾಶಪ್ಪನವರ್ ಬಂಡಾಯ ಸ್ಪರ್ಧೆ, ತಮ್ಮ ಸ್ಪರ್ಧೆಯಿಂದ ಆಗುವ ಅನುಕೂಲ ಕುರಿತು ಸಿದ್ದರಾಮಯ್ಯಗೆ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪತಿ ವಿಜಯಾನಂದ ಕಾಶಪ್ಪನವರ್ ಕೂಡ ಸಭೆಯಲ್ಲಿ ಹಾಜರಿದ್ದರು. ಆದರೆ ಕಾಶಪ್ಪನವರ್ ಅವರ ವಾದವನ್ನು ಕೇಳಿಸಿಕೊಂಡ ಸಿದ್ದರಾಮಯ್ಯ, ಟಿಕೆಟ್ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಮಗೆ ಟಿಕೆಟ್ ಕೊಡುವಂತೆ ಯಾವುದೇ ಜಿಲ್ಲಾ ನಾಯಕರು ಹೇಳಿಲ್ಲ. ಇದಕ್ಕೂ ಮೊದಲೇ ನಿಮಗೆ ಕೆಲ ಸೂಚನೆ ನೀಡಲಾಗಿತ್ತು. ಜಿಲ್ಲೆಯಲ್ಲಿನ ಸಮಸ್ಯೆ ಪರಿಹಾರ ಮಾಡಿಕೊಳ್ಳುವಂತೆ ಮೊದಲೇ ಹೇಳಿದ್ದೇವು. ಜಿಲ್ಲಾ ನಾಯಕರು, ಸ್ಥಳೀಯ ನಾಯಕರ ಜೊತೆಗಿನ ಭಿನ್ನಾಭಿಪ್ರಾಯ ಸೇರಿದಂತೆ ಹಲವು ಸಮಸ್ಯೆಗಳಿಗೆ ತಾರ್ಕಿಕ ಅಂತ್ಯಕೋರಲು ಸೂಚಿಸಲಾಗಿತ್ತು. ಆದರೆ ಈ ಸಮಸ್ಯೆಗಳಿಗೆ ನೀವು ಪರಿಹಾರ ಕಂಡುಕೊಂಡಿಲ್ಲ. ಲೋಕಸಭಾ ಕ್ಷೇತ್ರ ಉಸ್ತುವಾರಿ ಪ್ರಿಯಾಂಕಾ ಖರ್ಗೆಯಿಂದಲೂ ವೀಣಾ ಹೆಸರು ಪ್ರಸ್ತಾಪವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೀಗ ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ಮಾಡುವುದಿಲ್ಲ. ಸಂಯುಕ್ತ ಪಾಟೀಲ್ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷ ನೀಡಿದ್ದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಹೀಗಾಗಿ ಸಂಯುಕ್ತ ಪಾಟೀಲ್‌ಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ವಿಚಾರ ಬಿಟ್ಟು ಬೇರೆ ಏನಾದರು ಇದ್ದರೆ ಹೇಳಿ ಎಂದು ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

ಹೊರಗಿನವರಿಗೆ ಟಿಕೆಟ್ ಕೊಟ್ಟಿರುವುದು ಯಾಕೆ ಎಂದು ವೀಣಾ ಕಾಶಪ್ಪನವರ್ ಬೆಂಬಲಿಗರು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಮೈಸೂರಿನಿಂದ ಬದು ಬಾದಾಮಿಯಲ್ಲಿ ಸ್ಪರ್ಧೆ ಮಾಡಿಲ್ಲವೇ? ನನ್ನನ್ನು ಬಾದಾಮಿ ಜನರು ಆಯ್ಕೆ ಮಾಡಲಿಲ್ಲವೇ? ಈ ವಾದಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ವೀಣಾ ಕಾಶಪ್ಪನವರ್‌ನ್ನು ಸಿಎಂ ಸಮಾಧಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ನೀಡುತ್ತೇನೆ ಎಂದಿದ್ದಾರೆ . ಆದರೆ ಯಾವುದೇ ನಿರ್ದಿಷ್ಟ ಹುದ್ದೆ ಅಂತ ಹೇಳಲಾರೆ ಎಂದಿದ್ದಾರೆ. ಸಿದ್ದರಾಮಯ್ಯ ಖಡಕ್ ಸೂಚನೆ ಸಿಗುತ್ತಿದ್ದಂತೆ ವೀಣಾ ಕಾಶಪ್ಪನವರ್ ಮತ್ತೆ ಕಣ್ಣೀರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!