ಹೊಸದಿಗಂತ ವರದಿ ಹುಬ್ಬಳ್ಳಿ:
ದುನಿಯಾ ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಶ್ ಅವರ ಅಭಿನಯದ ʼಬ್ಯಾಡ್ ಮ್ಯಾನರ್ಸ್ʼ ಸಿನಿಮಾ ನ. 24ರಂದು ರಾಜ್ಯದ್ಯಾಂತ 250-300 ಚಿತ್ರ ಮಂದಿರದಲ್ಲಿ ತೆರೆ ಕಾಣಲಿದೆ.
ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅಂಬರೀಶ್ ಪುತ್ರ ಹಾಗೂ ನಟ ಅಭಿಷೇಕ್ ಮಾತನಾಡಿ, ಕೆ.ಎಂ.ಸುರ್ ಅವರ ಸ್ಟುಡಿಯೋ 18 ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಜಯಣ್ಣ ಫಿಲಂಸ್ ಕೈಜೋಡಿಸಿದ್ದಾರೆ ಎಂದರು.
ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಂದೆ ಅಂಬರೀಶ್ ಹಾಗೂ ಶಂಕರನಾಗ್ ಅವರ ಪ್ರೇರಣೆಯಾಗಿದ್ದಾರೆ. ಖಾಕಿ, ಸಿನಿಮಾ ಹಾಗೂ ಕಲಾವಿದರಿಗೂ ವಿಶೇಷ ನಂಟಿದೆ. ಈ ಹಿಂದೆ ಸಿನಿಮಾ ತೆರೆಕಾಣಬೇಕಿತ್ತು. ಪರದೆಯ ಮೇಲೆ ಉತ್ತಮವಾಗಿ ಮೂಡಿಬರಲಿ ಎಂಬ ಉದ್ದೇಶದಿಂದ ತಡವಾಗಿದೆ ಎಂದು ಅವರು ತಿಳಿಸಿದರು.
ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಮತ್ತು ಶೇಖರ್ ಎಸ್. ಅವರ ಛಾಯಾಗ್ರಹಣವಿದೆ. ಸಿನಿಮಾದಲ್ಲಿ 4-5 ಹಾಡುಗಳಿವೆ. ಟ್ರೈಲರ್ ಸಹ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೆಂಗಳೂರು, ಮೈಸೂರ, ಕನಕಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿನಿಮಾಗೆ ಬೇಕಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ಈ ಚಿತ್ರದಲ್ಲಿ ರಚಿತಾ ರಾಮ್ ಮತ್ತು ಚೊಚ್ಚಲ ನಟಿ ಪ್ರಿಯಾಂಕಾ ಕುಮಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ತಾರ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿಪ್ರತಾಪ್, ಮಿತ್ರಾ, ಮೋಹನ್ ಜುನೇಜಾ, ಪ್ರಶಾಂತ ಸಿದ್ದಿ ಸೇರಿ ದೊಡ್ಡ ತಾರಬಳಗ ಸಿನಿಮಾದಲ್ಲಿದೆ. ಕಲಾ ನಿರ್ದೇಶನ ಸುರೇಶ ಬಂಗನವರ, ಮೋಹನ ಕೆರೆ, ಸಾಹಸ, ನೃತ್ಯ ಸಂಯೋಜನೆ ರವಿವರ್ಮ, ನೃತ್ಯ ಸಂಯೋಜನೆ ಧನಂಜಯ್ ಬಿ. ಮಾಡಿದ್ದಾರೆ.