Saturday, September 23, 2023

Latest Posts

ಬದಿಯಡ್ಕ: ಕೊಡುಗೈ ದಾನಿ ಸಾಯಿರಾಂ ಭಟ್ ಅವರಿಗೆ ಸರ್ವಪಕ್ಷ ಸಂತಾಪ ಸೂಚಕ ಸಭೆ

ಹೊಸದಿಗಂತ ವರದಿ, ಬದಿಯಡ್ಕ:

ಶನಿವಾರ ಅಗಲಿದ ನಾಡಿನ ಕೊಡುಗೈ ದಾನಿ, ಸಹೃದಯಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗೆ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಸೋಮವಾರ ಸರ್ವಪಕ್ಷಗಳಿಂದ ಸಂತಾಪ ಸೂಚಕ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ, ವಕೀಲ ಕೆ. ಶ್ರೀಕಾಂತ್ ಅವರು, ದೈವದತ್ತವಾಗಿ ಲಭಿಸಿದ ಅನುಗ್ರಹವನ್ನು ನಾಡಿನ ಜನತೆಗೆ ನೀಡಿ ಹೃದಯವಂತ, ಧೀಮಂತನಾಗಿ ಯಾರಿಗೂ ಅಂಜದೆ, ಅಳುಕದೆ, ಆತ್ಮವಿಶ್ವಾಸ, ಶ್ರದ್ಧೆಯ ಮೂಲಕ ಮನುಷ್ಯನೂ ದೇವರಾಗಬಹುದು ಎಂಬುದನ್ನು ತೋರ್ಪಡಿಸಿದ ಮಹಾನ್ ವ್ಯಕ್ತಿ ಸಾಯಿರಾಂ ಭಟ್ ಎಂದರು.
ಅವರು ಎಂದೂ ಪ್ರಚಾರ ಬಯಸಲಿಲ್ಲ. ದಾನ ಧರ್ಮಗಳಲ್ಲಿ ಜೀವನದ ಆನಂದವನ್ನು ಕಂಡರು. ಅವರಿಗೆ ಪರಮಾತ್ಮನು ಸದ್ಗತಿಯನ್ನು ನೀಡಲಿ ಎಂದು ಶ್ರೀಕಾಂತ್ ಪ್ರಾರ್ಥಿಸಿದರು.
ಸಭೆಯಲ್ಲಿ‌ ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ರೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ವಿಭಾಗ ಸಂಘ ಚಾಲಕ ಶಿವಶಂಕರ ಭಟ್ ಗುಣಾಜೆ, ವಿವಿಧ ಪಕ್ಷಗಳ ಮುಖಂಡರಾದ ಎಂ.ಎಚ್.ಜನಾರ್ದನ, ಪಿ.ಜಿ.ಚಂದ್ರಹಾಸ ರೈ, ಎಂ.ಸುಧಾಮ ಗೋಸಾಡ, ಮಾಹಿನ್ ಕೇಳೋಟ್, ಸುಬೈರ್ ಬಾಪಾಲಿಪೊನಂ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ನುಡಿನಮನಗೈದರು. ಜನಪ್ರತಿನಿಧಿಗಳಾದ ಅಶ್ವಿನಿ, ಜಯಂತಿ, ಬಾಲಕೃಷ್ಣ ಶೆಟ್ಟಿ, ಸೌಮ್ಯಾ ಮಹೇಶ್ ನಿಡುಗಳ, ಸ್ವಪ್ನಾ, ಈಶ್ವರ ಮಾಸ್ತರ್ ಪೆರಡಾಲ, ಹರೀಶ್ ನಾರಂಪಾಡಿ, ಮಹೇಶ್ ವಳಕ್ಕುಂಜ ಹಾಗೂ ಸಾಯಿರಾಂ ಭಟ್ ಅವರ ಅಭಿಮಾನಿಗಳು ಉಪಸ್ಥಿತರಿದ್ದು ಪುಷ್ಪಾರ್ಚನೆಗೈದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!