ಪಾಕಿಸ್ತಾನ ನ್ಯಾಯಾಂಗದಲ್ಲಿ ಹೊಸ ಹೆಜ್ಜೆ: ಸುಪ್ರೀಂಕೋರ್ಟ್ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯೇಶಾ ಮಲ್ಲಿಕ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯೇಶಾ ಮಲ್ಲಿಕ್ ನೇಮಕಗೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಆಯೆಶಾ ಅವರು ಮೊದಲ ಮಹಿಳಾನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದು ಮಹತ್ತರ ಹೆಜ್ಜೆಯಾಗಿದೆ.

ಈ ಬಗ್ಗೆ ವಕೀಲ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತ ನಿಘಾತ್ ದಾದ್ ಪ್ರತಿಕ್ರಿಯೆ ನೀಡಿ, 16 ಪುರುಷ ನ್ಯಾಯಾಧೀಶರೊಂದಿಗೆ ಕುಳಿತಿದ್ದ ಆಯೇಶಾ ಅವರು ನಿನ್ನೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೊಂದು ಮಹತ್ವದ ಹೆಜ್ಜೆ. ಪಾಕಿಸ್ತಾನದ ನ್ಯಾಯಂಗ ವಿಭಾಗದಲ್ಲಿ ಇತಿಹಾಸ ಸೃಷ್ಟಿ ಎಂದಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಆಯೇಶಾ ಅವರು 20 ವರ್ಷಗಳಿಂದ ಲಾಹೋರ್‌ನ ಹೈಕೋರ್ಟ್ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2031ರವರೆಗೂ ಆಯೇಶಾ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಬಹುದು. 2030ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸ್ಪರ್ಧಿಸಬಹುದು.

ಪಂಜಾಬ್ ಪ್ರಾಂತ್ಯದ ಕೋರ್ಟ್‌ನಲ್ಲಿದ್ದಾಗ ಪಿತೃಪ್ರಧಾನ ಕಾನೂನು ನೀತಿಗಳನ್ನು ಇವರು ಹಿಂತೆಗೆದಿದ್ದರು. ಮಹಿಳೆಯರು ಲೈಂಗಿಕ ಅನುಭವ ಹೊಂದಿದ್ದಾರೋ ಇಲ್ಲವೋ ಎಂದು ತಿಳಿಯಲು ಮಾಡುವ ವೈದ್ಯಕೀಯ ಪರೀಕ್ಷೆಯನ್ನು ಇವರು ಕಾನೂನುಬಾಹಿರಗೊಳಿಸಿದ್ದರು. ಆಯೇಶಾ ಅವರ ನೇಮಕಾತಿಗೆ ಪಾಕಿಸ್ತಾನ ಬಾರ್ ಕೌನ್ಸಿಲ್ ವಿರೋಧ ವ್ಯಕ್ತಪಡಿಸಿತ್ತು. ಅವರಿಗಿಂತ ಹಿರಿಯ ನ್ಯಾಯಮೂರ್ತಿಗಳಿರುವಾಗ ಅವರಿಗೆ ಸ್ಥಾನ ನೀಡುವುದು ಸೂಕ್ತವಲ್ಲ ಎಂದು ಹೇಳಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!