ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳಿಗೆ ಕೆಸರುಗದ್ದೆಯ ಅನುಭವ ಪಾಠ!

ಹೊಸದಿಗಂತ ವರದಿ, ಬದಿಯಡ್ಕ:

ನೀರ್ಚಾಲು ಸಮೀಪದ ಕಾನತ್ತಿಲ ಗದ್ದೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳು ಶುಕ್ರವಾರ ಕೆಸರಿನಲ್ಲಿ ಮಿಂದು ಸಂಭ್ರಮಿಸಿದರು.

ಗದ್ದೆ ಬೇಸಾಯದ ಜ್ಞಾನವನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಶಾಲಾ ಅಧ್ಯಾಪಕ ವೃಂದದ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಳುಮೆ ಮಾಡಿದ ಗದ್ದೆಗೆ ಬೇಕಾಗಿರುವ ಹಟ್ಟಿಗೊಬ್ಬರವನ್ನು ಮಕ್ಕಳು ಬುಟ್ಟಿಯಲ್ಲಿ ತುಂಬಿಸಿ ಗದ್ದೆಗೆ ಉಣಬಡಿಸಿದರು. ನಾಗರಪಂಚಮಿಯ ವಿಶೇಷ ದಿನದಲ್ಲಿ ಪ್ರಕೃತಿ ಪೂಜನೆಯೊಂದಿಗೆ ಮಣ್ಣಿನ ಫಲವತ್ತತೆಯ ಅನಿವಾರ್ಯತೆಯನ್ನು ಹಿರಿಯರ ಅನುಭವ ನುಡಿಗಳಿಂದ ಕೇಳಿ ತಿಳಿದುಕೊಂಡರು.

ಮನೆಯ ಅಂಗಳದಿಂದ ವಾಹನದಲ್ಲಿಯೇ ಸಂಚರಿಸುವ ಕಾಲಘಟ್ಟದಲ್ಲಿ ಗದ್ದೆ ಮಣ್ಣಿನ ಸೊಗಡನ್ನು ಮೈಕೈಗಳಿಗೆ ಮೆತ್ತಿ ಮಕ್ಕಳು ವಿವಿಧ ದೇಶೀಯ ಆಟಗಳೊಂದಿಗೆ ಹೊತ್ತಿನ ಪರಿವೆಯನ್ನೂ ಮರೆತು ಹೊತ್ತುಕಳೆದರು. ಕೊನೆಯಲ್ಲಿ ಸನಿಹದಲ್ಲಿಯೇ ಇರುವ ಹೊಳೆಯಲ್ಲಿ ಈಜಾಡಿದರು.

ಶ್ರೀರಾಮಚಂದ್ರಾಪುರ ಮಠದ ಬತ್ತದ ಬುತ್ತಿಯಡಿಯಲ್ಲಿ ಡಾ.ವೈ.ವಿ.ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾನತ್ತಿಲ ದಿ. ಮಹಾಲಿಂಗ ಭಟ್ಟರ ಗದ್ದೆಯು ಈ ಕಾರ್ಯಕ್ಕೆ ಮುಡಿಪಾಯಿತು. ಶಾಲಾ ಮುಖ್ಯೋಪಾಧ್ಯಾಯರು, ಕಾರ್ಯದರ್ಶಿ, ಅಧ್ಯಾಪಕ ವೃಂದ ಮೊದಲಾದವರು ಮಕ್ಕಳೊಂದಿಗೆ ದುಡಿದರು. ರಾಜಗೋಪಾಲ ಕಾನತ್ತಿಲ ಹಾಗೂ ಸರೋಜ ಕಾನತ್ತಿಲ ತಮ್ಮ ಮನೆಯನ್ನೇ ಸಂಪೂರ್ಣವಾಗಿ ಮಕ್ಕಳಿಗಾಗಿ ವಿನಿಯೋಗಿಸಿದರು. ಮಧ್ಯಾಹ್ನದ ದಣಿವಾರಿಸುವುದಕ್ಕೆ ರುಚಿಕರವಾದ ಭೋಜನದ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡರು. ಅನುಭವಪೂರ್ಣ ಬತ್ತದ ಬುತ್ತಿಯನ್ನು ಅಣಿಗೊಳಿಸುವಲ್ಲಿ ಸಂಚಾಲನಾ ಸಮಿತಿಯ ಸದಸ್ಯರೂ, ಪಾಲಕರು ಹಾಗೂ ಸ್ಥಳೀಯರು ಸಹಕಾರವನ್ನಿತ್ತರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!