ಹೊಸದಿಗಂತ ವರದಿ, ಮಂಗಳೂರು:
ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ಟಾರ್ ಬಳಿಯ ಕಣಕ್ಕೂರು ಎಂಬಲ್ಲಿ ಇದೀಗ ಬೆಟ್ಟದ ಕೆಳ ಭಾಗದ ಕಾಡಿನಿಂದ ಕೆಂಪು ಮಣ್ಣು ಮಿಶ್ರಿತ ನೀರು ಹೊರಬರುತ್ತಿದ್ದು ಇದೀಗ ಸ್ಥಳೀಯ ಜನರನ್ನು ಇದೀಗ ಚಿಂತೆ ಗೀಡುಮಾಡಿದೆ.
ಸುಳ್ಯ ಬಂದಡ್ಕ ಸಂಪರ್ಕಿಸುವ ರಸ್ತೆಯ ಬಳಿಯಲ್ಲಿ ಗೋಚರಿಸಿದ್ದು ರಸ್ತೆಯಿಂದ ಸುಮಾರು 150 ಮೀಟರ್ ದೂರದಿಂದ ಈ ನೀರು ಬರುತ್ತಿದ್ದು ಅಲ್ಲಿ ಸಂಪೂರ್ಣವಾಗಿ ಮಣ್ಣು ಮಿಶ್ರಿತವಾಗಿ ನೀರು ಹೊರ ಬರುತ್ತಿರುವುದು ಕಂಡುಬರುತ್ತಿದೆ. ಸ್ಥಳೀಯರ ಮಾಹಿತಿ ಪ್ರಕಾರ ಸುಮಾರು ಎರಡು ಮೂರು ವರ್ಷಗಳ ಹಿಂದೆ ಒಮ್ಮೆ ಇದೇ ಮಾದರಿಯಲ್ಲಿ ನೀರು ಹೊರಬಂದಿದ್ದು ಅದು ಎರಡು ದಿನಗಳಲ್ಲಿ ನಿಂತಿತ್ತು ಆದರೆ ಈ ಭಾರಿ ಮಾತ್ರ ಮಳೆಯು ಇಲ್ಲದೇ ಇದ್ದರೂ ನಿರಂತರವಾಗಿ ನಾಲ್ಕು ದಿನಗಳಿಂದ ಒಂದೇ ತರಹ ನೀರು ಬರುತ್ತಿದ್ದು ಇದು ಸ್ಥಳೀಯರನ್ನು ಭಾರಿ ಆತಂಕಕ್ಕೆ ದೂಡುವಂತೆ ಮಾಡಿದೆ. ಸ್ಥಳೀಯ ಪ್ರತಿನಿಧಿ ದಿನೇಶ್ ಕಣಕ್ಕೂರುರವರ ಗಮನಕ್ಕೆ ನೆರೆಯ ಮನೆಯ ಗೃಹಿಣಿ ಲೀಲಾವತಿ ಮಾಹಿತಿ ನೀಡಿದ ತಕ್ಷಣ ಅವರು ಗ್ರಾಮ ಆಡಳಿತಾಧಿಕಾರಿ ಶರತ್ ರವರ ಗಮನಕ್ಕೆ ತಂದು ಅವರು ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬರಲಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾ.ಪಂ.ಸದಸ್ಯ ದಿನೇಶ್ ಕಣಕ್ಕೂರು ಈ ಬಗ್ಗೆ ಮಾಧ್ಯಮ ಜತೆ ಮಾತನಾಡಿದ್ದು, ಇದೀಗ 2018 ರ ಕೊಡಗು ಘಟನೆ, ಇತ್ತೀಚೆಗೆ ನಡೆದ ವಯನಾಡು, ಶಿರೂರಿನ ಘಟನೆಗಳನ್ನು ಕಂಡಾಗ ಇಲ್ಲಿ ಕೂಡ ಭಯದ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಭೂ ವಿಜ್ಞಾನಿಗಳ ತಂಡ ಆಗಮಿಸಿ ಇದಕ್ಕೆ ಆಗಿರುವ ಕಾರಣಗಳ ಬಗ್ಗೆ ಮಾಹಿತಿ ನೀಡಬೇಕು.ಅಲ್ಲದೇ ಈ ರೀತಿಯ ಸಮಸ್ಯೆಗೆ ಕಾರಣವನ್ನು ಬಹಿರಂಗ ಪಡಿಸಬೇಕು ಎಂದು ಹೇಳಿದರು .
ಗ್ರಾಮ ಆಡಳಿತಾಧಿಕಾರಿ ಶರತ್ ಕುಮಾರ್ ಮಾತನಾಡಿ ಇದು ನನ್ನ ಗಮನಕ್ಕೆ ಬಂದ ತಕ್ಷಣವೇ ತೆರಳಿ ವೀಕ್ಷಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು ಅವರು ಇದನ್ನು ವಿಜ್ಞಾನಿಗಳು ಮತ್ತು ಸರಕಾರಕ್ಕೆ ಮಾಹಿತಿ ನೀಡಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು .
ಕೊಡಗಿನ ಮೊಣ್ಣಂಗೇರಿಯಲ್ಲಿನ ಘಟನೆಯಲ್ಲಿ ಮನೆಗೆ ಹಾನಿಯಾಗಿ ಬೇರೆಡೆ ನಿವೇಶನ ಪಡೆದ ಸೀತಮ್ಮ ಎಂಬ ವೃದ್ದೆಯು ಪ್ರತಿ ಮಳೆಗಾಳದ ಸಂದರ್ಭದಲ್ಲಿ ಕಣಕ್ಕೂರಿನಲ್ಲಿ ಸಂಬಂಧಿಗಳ ಮನೆಯಲ್ಲಿ ನೆಲೆಸುತ್ತಾರೆ. ಈ ಸಲ ಕಣಕ್ಕೂರಿಗೆ ಬಂದ ಮಹಿಳೆಗೆ ಇಲ್ಲಿಯು ಕೆಸರು ಮಿಶ್ರಿತ ನೀರು ಕಂಡು ಭಯಬೀತರಾಗಿದ್ದು, ಮತ್ತೆ ಕೊಡಗಿನ ಅಂದಿನ ಆ ದಿನಗಳನ್ನು ವಿವರಿಸುತ್ತಾ ಕಣ್ಣೀರಾಗಿದ್ದಾರೆ.