ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಕಾನ್ಪುರದಲ್ಲಿ ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಲಿದೆ.
ಸುಮಾರು 3 ವರ್ಷಗಳ ನಂತರ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ.
ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿರುವ ಕಾರಣ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಅಲ್ಲದೆ ಈ ಟೆಸ್ಟ್ ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪೊಲೀಸರು ಈಗಾಗಲೇ 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕಾನ್ಪುರದಲ್ಲಿ ನಡೆಯಲ್ಲಿರುವ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೇ ಎರಡೂ ತಂಡಗಳು ಕಾನ್ಪುರಕ್ಕೆ ಬಂದಿಳಿದಿವೆ. ಹೀಗಾಗಿ ಎರಡೂ ತಂಡಗಳಿಗೆ ಬಿಗಿ ಭದ್ರತೆ ನೀಡುವ ಸಲುವಾಗಿ ಉಭಯ ತಂಡಗಳು ನೆಲೆಸಿರುವ ಹೋಟೆಲ್ ಹಾಗೂ ಗ್ರೀನ್ ಪಾರ್ಕ್ ಸ್ಟೇಡಿಯಂ ಲ್ಯಾಂಡ್‌ಮಾರ್ಕ್‌ಗಳನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಲಾಗಿದೆ ಎಂದು ಕಾನ್ಪುರ ಪೊಲೀಸ್ ಡಿಸಿಪಿ (ಪೂರ್ವ) ಶ್ರವಣ್ ಕುಮಾರ್ ಸಿಂಗ್ ಹೇಳಿದ್ದಾರೆ .
ಅಷ್ಟೇ ಅಲ್ಲ, ಈ ಪಂದ್ಯದ ಭದ್ರತೆಯ ಜವಾಬ್ದಾರಿಯನ್ನು ಡಿಸಿಪಿ, ಹೆಚ್ಚುವರಿ ಡಿಸಿಪಿ ಮತ್ತು ಎಸಿಪಿ ಶ್ರೇಣಿಯ ಅಧಿಕಾರಿಗಳಿಗೆ ವಹಿಸಲಾಗಿದೆ. ಹಾಗೆಯೇ, ಟೆಸ್ಟ್ ಪಂದ್ಯವನ್ನು ಯಶಸ್ವಿಯಾಗಿ ನಡೆಸಲು ಕಾನ್ಪುರ ಪೊಲೀಸರು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಕೋರಿದ್ದು, ಪಂದ್ಯದ ವೇಳೆ ಅವರನ್ನು ನಿಯೋಜಿಸಲಾಗುವುದು.
ವಾಸ್ತವವಾಗಿ, ಈ ಹೆಚ್ಚುವರಿ ಭದ್ರತೆಗೆ ಪ್ರಮುಖ ಕಾರಣವೆಂದರೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತಕ್ಕೆ ಬಂದಿರುವುದು. ವಾಸ್ತವವಾಗಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಬಾಂಗ್ಲಾದೇಶಿ ಹಿಂದುಗಳ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಹೀಗಾಗಿ ಬಾಂಗ್ಲಾದೇಶಿ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿರುವ ಭಾರತದ ಹಲವು ಹಿಂದು ಸಂಘಟನೆಗಳು ಬಾಂಗ್ಲಾದೇಶ ತಂಡವನ್ನು ಭಾರತಕ್ಕೆ ಕರೆಸುವುದನ್ನು ವಿರೋಧಿಸಿದ್ದವು. ಅಲ್ಲದೆ ಕೆಲ ಸಂಘಟನೆಗಳು ಪಂದ್ಯ ನಡೆಯದಂತೆ ತಡೆಯುವುದಾಗಿ ಬೆದರಿಕೆ ಹಾಕಿದ್ದವು.