November 6, 2026
Friday, November 6, 2026
spot_img

ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಜೈಲಿನಲ್ಲಿರುವ ಸಾಕ್ಷಿದಾರ ಪ್ರದೂಶ್ ಗೆ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಾಕ್ಷಿದಾರನಾಗಿ ಬದಲಾಗಿರುವ ಆರೋಪಿ ಪ್ರದೂಶ್‌ ಎಸ್‌. ರಾವ್‌ಗೆ ಜಾಮೀನು ನೀಡುವಂತೆ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.

ಪ್ರದೂಶ್‌ ತಂದೆ ಸುಬ್ಬಾರಾವ್‌ ಅವರ ಮೊದಲ ಪುಣ್ಯತಿಥಿಯ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಲು ನ.7 ರಿಂದ 12 ರವರೆಗೆ ಜಾಮೀನು ನೀಡಲಾಗಿದೆ. ಪುಣ್ಯತಿಥಿಯಲ್ಲಿ ಭಾಗಿಯಾಗಲು ಇಪ್ಪತ್ತು ದಿನಗಳ ಕಾಲ ಜಾಮೀನು ನೀಡುವಂತೆ ಪ್ರದೂಶ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನಂತರಾಮನಾಥ ಹೆಗಡೆ ಅವರು ಆರು ದಿನಗಳ ಜಾಮೀನು ನೀಡಿದ್ದಾರೆ.

ನಾಳೆ ಬೆಳಗ್ಗೆ ಎಂಟು ಗಂಟೆಗೆ ಪ್ರದೂಶ್‌ ಅವರನ್ನು ಜೈಲಿನಿಂದ ಮನೆಗೆ ಕರೆತರಬೇಕು. ಧಾರ್ಮಿಕ ಕಾರ್ಯಗಳು ಮುಗಿದ ನಂತರ ಮತ್ತೆ ಅವರನ್ನು ಜೈಲಿಗೆ ಕರೆತರಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ನವೆಂಬರ್ 7 ರಿಂದ 12 ರವರೆಗೆ ಪ್ರತಿದಿನ ಸಂಜೆ 6 ಗಂಟೆಯೊಳಗೆ ರಾವ್ ಅವರನ್ನು ಜೈಲಿಗೆ ಮರಳಿ ಕರೆತರಬೇಕು ಎಂದು ನಿರ್ದೇಶನ ನೀಡಲಾಗಿದೆ.

ಅಲ್ಲದೇ ಈ ಕಾರ್ಯಕ್ರಮದಲ್ಲಿ ಕುಟುಂಬದ ಯಾವೆಲ್ಲಾ ಸದಸ್ಯರು ಭಾಗಿಯಾಗಲಿದ್ದಾರೆ, ಪುರೋಹಿತರು ಯಾರು ಎನ್ನುವ ಮಾಹಿತಿಯನ್ನು ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು, ಇತರ ವ್ಯಕ್ತಿಗಳು, ಸಾಕ್ಷಿದಾರರು ಅಥವಾ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾದ ಸಾಕ್ಷಿಗಳ ಆಪ್ತ ಸಂಬಂಧಿಕರೊಂದಿಗೆ ರಾವ್ ಯಾವುದೇ ರೀತಿಯಲ್ಲಿ ಸಂಪರ್ಕ ಸಾಧಿಸಬಾರದು ಎಂದು ಸೂಚಿಸಿದೆ.

Must Read