ಅಜರ್‌ಬೈಜಾನ್‌ ಶೂಟಿಂಗ್‌ ವಿಶ್ವಕಪ್‌ ನಲ್ಲಿ ಭಾರತದ ವನಿತೆಯರಿಗೆ ಚಿನ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತವು ಚಿನ್ನದ ಪದಕದೊಂದಿಗೆ ತನ್ನ ಖಾತೆ ತೆರೆದಿದೆ.
ಎಲವೆನಿಲ್ ವಲರಿವನ್, ರಮಿತಾ ಮತ್ತು ಶ್ರೇಯಾ ಅಗರವಾಲ್ ಅವರಿದ್ದ ತಂಡವು 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆ ಮೆರೆದಿದೆ.
ಚಿನ್ನದ ಪದಕಕ್ಕಾಗಿ ನಡೆದ ಫೈನಲ್ ಹೋರಾಟದಲ್ಲಿ ಡೆನ್ಮಾರ್ಕ್‌ ತಂಡವನ್ನು 17-5 ಅಂತರದಿಂದ ಬಗ್ಗುಬಡಿದ ಭಾರತದ ವನಿತೆಯರ‌ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.
ಎರಡು ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ಭಾರತ ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿತ್ತು. ಟೋಕಿಯೊ ಗಮನಾರ್ಹ ಪ್ರದರ್ಶನ ನೀಡಿದ್ದ ಶೂಟರ್ ಎವೆನಿಲ್ ವಲರಿವನ್ ಶೂಟಿಂಗ್‌ ವಿಶ್ವಕಪ್ ಫೈನಲ್‌ನಲ್ಲೂ ಅದ್ಭುತ ನಿರ್ವಹಣೆ ತೋರಿದರು. 11 ಅವಕಾಶಗಳಲ್ಲಿ 10 ಕ್ಕಿಂತ ಹೆಚ್ಚು ಅಂಕ ಕಲೆಹಾಕಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದರು. ರಮಿತಾ ಮತ್ತು ಶ್ರೇಯಾ ಅಗರವಾಲ್ ಅವರೂ ಸಹ ಆಕರ್ಷಕ ಪ್ರದರ್ಶನ ತೋರಿದರು. ಅನ್ನಾ ನೀಲ್ಸನ್, ಎಮ್ಮಾ ಕೋಚ್ ಮತ್ತು ರಿಕ್ಕೆ ಮಾಯೆಂಗ್ ಇಬ್ಸೆನ್ ಅವರಿದ್ದ ಡೆನ್ಮಾರ್ಕ್ ತಂಡ ಕಳೆದ ಎಂಟು ಮುಖಾಮುಖಿಗಳಲ್ಲಿ ಎದುರಾಗಿದ್ದಾಗ ಭಾರತ ತಂಡವನ್ನು ಸೋಲಿಸಿತ್ತು. ಆದರೆ, ವಿಶ್ವಕಪ್‌ ನಂತಹ ಮಹತ್ವದ ಪಂದ್ಯಾವಳಿಯಲ್ಲಿ ಲಯಕ್ಕೆ ಮರಳಿದ ಭಾರತೀಯರು ತಮ್ಮ ಪರಮ ಎದುರಾಳಿಗೆ ಹೀನಾಯ ಸೋಲುಣಿಸಿದರು, ಪೋಲೆಂಡ್ ಕಂಚಿನ ಪದಕವನ್ನು ಗೆದ್ದುಕೊಂಡಿತು.

ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಪುರುಷರು:
ಭಾರತದ ಪುರುಷರ ಏರ್ ರೈಫಲ್ ತಂಡ ಕಂಚಿನ ಪದಕಕ್ಕಾಗಿ ಕ್ರೊಯೇಷಿಯಾ ವಿರುದ್ಧದ ಪಂದ್ಯದಲ್ಲಿ 10-16 ಅಂತರದಿಂದ ಸೋತರು. ಭಾರತೀಯ ಪುರುಷರು ಅರ್ಹತಾ ಹಂತ 1 ರಲ್ಲಿ ಎರಡನೇ ಮತ್ತು ಹಂತ 2 ರಲ್ಲಿ ಮೂರನೇ ಸ್ಥಾನದಲ್ಲಿದ್ದರು. ಭಾರತೀಯ ಶೂಟರ್‌ಗಳು ಗುರುವಾರದಿಂದ 50 ಮೀಟರ್ ರೈಫಲ್ 3 ಸ್ಥಾನಗಳ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಭಾರತವು ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ, ಸರ್ಬಿಯಾ ಎರಡು ಚಿನ್ನ ಸೇರಿ ಒಟ್ಟು ನಾಲ್ಕು ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡು ಚಿನ್ನ ಮತ್ತು ಒಂದು ಕಂಚಿನೊಂದಿಗೆ ಕೊರಿಯಾ 2 ನೇ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!