Friday, March 24, 2023

Latest Posts

ಬಲಿಜ ಸಮುದಾಯ ಒಗ್ಗಟ್ಟಾಗಿ ತಮ್ಮ ಹಕ್ಕಿಗಾಗಿ ಹೋರಾಟ ರೂಪಿಸಬೇಕು: ಟಿ.ಪಿ.ರಮೇಶ್

ಹೊಸದಿಗಂತ ವರದಿ ಮಡಿಕೇರಿ :

ರಾಜ್ಯ ಹಾಗೂ ಜಿಲ್ಲೆಯಲ್ಲಿ ಬಲಿಜ ಸಮಾಜಗಳು ಇನ್ನೂ ಬಲಿಷ್ಠವಾಗಿ ಬೆಳೆದಿಲ್ಲ. ಸಣ್ಣ ಸಣ್ಣ ಸಮಾಜಗಳು ರಾಜ್ಯದಲ್ಲಿ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿ ಯಶಸ್ವಿಯಾಗಿದ್ದರೂ ಕೂಡ ಬಲಿಜ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯಿದೆ. ಕೊಡಗಿನ ಬಲಿಜರು ಒಗ್ಗಟ್ಟಿನೊಂದಿಗೆ ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹಿರಿಯ ಬಲಿಜ ಮುಖಂಡ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಮಡಿಕೇರಿ ತಾಲೂಕು ಬಲಿಜ ಸಂಘ, ಕೊಡಗು ಬಲಿಜ ಸಮಾಜದ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ಬಾಲ ಭವನ ಸಭಾಂಗಣದಲ್ಲಿ ಜರುಗಿದ ಕೈವಾರ ತಾತಯ್ಯ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಭಿಪ್ರಾಯ ವ್ಯತ್ಯಾಸ, ಭಿನ್ನಾಭಿಪ್ರಾಯ ಬದಿಗೊತ್ತಿ ಜಿಲ್ಲೆಯ ಎಲ್ಲ ತಾಲೂಕು ,ಜಿಲ್ಲಾ ಬಲಿಜ ಸಮಾಜಗಳು ಒಗ್ಗಟ್ಟಾಗಿ 2ಎ ಹಾಗೂ ಬಲಿಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹೋರಾಟ ರೂಪಿಸಬೇಕು ಎಂದು ಅವರು ಹೇಳಿದರು.

ಧಾರ್ಮಿಕ, ಆಧ್ಯಾತ್ಮಿಕ ಪ್ರತಿಪಾದಕರಾದ ಕೈವಾರ ತಾತಯ್ಯನೆಂದೇ ಖ್ಯಾತನಾಮರಾದ ಯೋಗಿ ನಾರಾಯಣ ಯತೀಂದ್ರರ 297ನೇ ಜಯಂತೋತ್ಸವವನ್ನು ನಾಡಿನೆಲ್ಲೆಡೆ ಸರ್ಕಾರಿ ಕಾರ್ಯಕ್ರಮವಾಗಿ ಕಳೆದ ವರ್ಷದಿಂದ ಆಚರಣೆ ಮಾಡುತ್ತಾ ಬರುತ್ತಿದ್ದೇವೆ. ಗುರುಕುಲದಲ್ಲಿ ಶಿಕ್ಷಣ ಪೂರೈಸಿದ ತಾತಯ್ಯನವರು ಕೇವಲ ಬಲಿಜ ಸಮಾಜದ ದಾರ್ಶನಿಕರಲ್ಲ. ಲೋಕ ಕಲ್ಯಾಣಕ್ಕಾಗಿ ದಾಸ ಸಾಹಿತ್ಯ ಪ್ರತಿಪಾದಕರಾಗಿ, ಕೀರ್ತನಕಾರರಾಗಿ ಎಲ್ಲರ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಿದವರು ಎಂದು ರಮೇಶ್ ಬಣ್ಣಿಸಿದರು.

ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ಶ್ರೀ ಕೈವಾರ ನಾರೇಯಣ ಯತೀಂದ್ರರು ಒಬ್ಬ ಸಾಮಾನ್ಯ ಪ್ರಜೆಯಾಗಿ ಬಳೆ ಕಾಯಕವನ್ನು ಸ್ವೀಕರಿಸಿ,ಬಳೆ ತೊಡಿಸುವ ಸೇವೆಯನ್ನು ಮಾಡಿ, ಪರನಾರಿಯನ್ನು ಮಾತೃ ಭಾವದಿಂದ ನೋಡಿ ಕಾಸಿನ ಆಸೆಯನ್ನು ತೊರೆದು ಕಡು ಬಡವರಿಗೆ ಉಚಿತವಾಗಿ ಬಳೆಯನ್ನು ತೊಡಿಸಿ ಆ ಪುಣ್ಯವನ್ನು ಕೈವಾರದ ಅಮರನಾರೇಯಣ ಸ್ವಾಮಿಗೆ ಅರ್ಪಿಸಿದವರು. ಪ್ರಾಪಂಚಿಕ ಕಷ್ಟಗಳಿಗೆ ಹೆದರದೆ ಸಾತ್ವಿಕ ಜೀವನ ನಡೆಸಿ ಪವನಯೋಗವನ್ನು ಸಾಧಿಸಿ, ಭವ ಬಂಧವನ್ನು ಕಳಚಿಕೊಂಡ ಮಹಾತ್ಮರನ್ನು ಕರ್ನಾಟಕದ ನಾಸ್ಟ್ರಾಡಾಮಸ್ ಎಂದೂ ಕರೆಯಲಾಗುತ್ತಿದೆ. ಕೊರೋನಾ ಮಹಾಮಾರಿ ವಿಶ್ವವನ್ನು ಅಪ್ಪಳಿಸುವದನ್ನು 250 ವರ್ಷಗಳ ಹಿಂದೆಯೇ ತಮ್ಮ ಕಾಲಜ್ಞಾನದಲ್ಲಿ ಉಲ್ಲೇಖಿಸಿದ್ದರು.
ಮುಂಬರುವ ಉತ್ಪಾತಗಳು,ಜನ ಕ್ಷಯ, ಸಮಾಜದಲ್ಲಿ ಆಗುವ ಬದಲಾವಣೆಗಳು, ಜನರಲ್ಲಿ ಮಿತಿಮೀರಿದ ಅಧರ್ಮ ಕಾರ್ಯಗಳು, ಸ್ವಾತಂತ್ರ್ಯ ನಂತರ ಭಾರತದ ಜನಗಳಲ್ಲಿ ಹೆಚ್ಚುವ ಅತಿಯಾಸೆ, ಮೋಸ,ವಂಚನೆಗಳು, ಆಡಳಿತ ನಡೆಸುವವರ ಕುತಂತ್ರ ಎಲ್ಲವನ್ನೂ ಕಾಲಜ್ಞಾನದಲ್ಲಿ ಉಲ್ಲೇಖಿಸಿದ ಅಂಶಗಳು ಅಕ್ಷರಶಃ ನಿಜವಾಗಿವೆ ಎಂದು ವಿವರಿಸಿದರು.

ಕೊಡಗು ಬಲಿಜ ಸಮಾಜ ಜನಪರ ನಿಲುವಿನೊಂದಿಗೆ ದಿಟ್ಟ ಹೋರಾಟ ಮಾಡುತ್ತಿದೆ. ಜಲಪ್ರಳಯ ಹಾಗೂ ಕೊರೋನಾ ಮಹಾಮಾರಿಯಿಂದಾಗಿ ನಿಲುಗಡೆಯಾಗಿರುವ ಕ್ರೀಡೋತ್ಸವವನ್ನು ಮಡಿಕೇರಿ ತಾಲೂಕು ಬಲಿಜ ಸಂಘದ ಸಹಯೋಗದಲ್ಲಿ ಆಯೋಜಿಸಲು ಉತ್ಸುಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಬಲಿಜ ಸಂಘದ ಅಧ್ಯಕ್ಷೆ ಮೀನಾಕ್ಷಿ ಕೇಶವ್, ನಮ್ಮ ಜನಾಂಗಕ್ಕೆ ಬೇಕಾದಷ್ಟು ತಿಳುವಳಿಕೆ ಇದ್ದರೂ ಒಗ್ಗಟ್ಟಿನ ಕೊರತೆ ಇದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಸಮಸ್ತ ಬಲಿಜರು ಒಗ್ಗೂಡುವ ಸಲುವಾಗಿ ಜಿಲ್ಲಾ ಮಟ್ಟದ ಬಲಿಜ ಕ್ರೀಡೋತ್ಸವವನ್ನು ಮೂರ್ನಾಡುವಿನಲ್ಲಿ ಏರ್ಪಡಿಸುವ ಉದ್ಧೇಶವಿದೆ ಎಂದರು.

ಕೊಡಗು ಬಲಿಜ ಸಮಾಜ ಉಪಾಧ್ಯಕ್ಷ ಟಿ.ವಿ.ಲೋಕೇಶ್, ಟಿ.ಆರ್.ಕೇಶವ್, ಮಡಿಕೇರಿ ನಗರ ಸಭೆ ಮಾಜಿ ಸದಸ್ಯ ಉದಯಕುಮಾರ್ ಮುಂತಾದವರು ಸಭೆಯಲ್ಲಿ ಮಾತನಾಡಿದರು. ಸಮಾಜದ ಹಿರಿಯರಾದ ಗಜರಾಜ ನಾಯ್ಡು, ಲೋಗನಾಥ್, ರಮೇಶ್ ನಾಪೋಕ್ಲು ಭವಾನಿ, ಪುರುಷ ಮುಂತಾದವರು ಉಪಸ್ಥಿತರಿದ್ದರು. ವೆಂಕಟೇಶ್ ಪ್ರಾರ್ಥಿಸಿ, ಲೋಕೇಶ್ ಸ್ವಾಗತಿಸಿ ವಂದಿಸಿದರು.

ಮಧ್ಯಾಹ್ನ ನಡೆದ ಸಭೆಯಲ್ಲಿ ಮೂರ್ನಾಡುವಿನಲ್ಲಿ ಜಿಲ್ಲಾ ಮಟ್ಟದ ಬಲಿಜ ಕುಟುಂಬ ತಂಡಗಳ ನಡುವೆ ಕ್ರೀಡೋತ್ಸವ ಹಾಗೂ ಕೈವಾರ ತಾತಯ್ಯ ದರ್ಶನಕ್ಕೆ ಕೋಲಾರ ಜಿಲ್ಲೆಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!