ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಸಭೆ-ಸಮಾರಂಭಗಳು ಮತ್ತು ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಕೆಲವು ಇಲಾಖೆಗಳು ಇನ್ನೂ ಈ ನಿಯಮವನ್ನು ಉಲ್ಲಂಘಿಸುತ್ತಿರುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಗಂಭೀರವಾಗಿ ಪರಿಗಣಿಸಿದೆ. ನಿಯಮ ಉಲ್ಲಂಘಿಸುವ ಸರ್ಕಾರಿ ಇಲಾಖೆಗಳು, ಮಹಾನಗರ ಪಾಲಿಕೆಗಳು ಮತ್ತು ಜಿಲ್ಲಾಡಳಿತಗಳಿಗೆ ಮಂಡಳಿಯು ಶೀಘ್ರದಲ್ಲೇ ಅಧಿಕೃತ ನೋಟಿಸ್ ಜಾರಿ ಮಾಡಲಿದ್ದು, ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದೆ.
ವರ್ಷಕ್ಕೆ 2 ಕೋಟಿ ಪ್ಲಾಸ್ಟಿಕ್ ಬಾಟಲಿಗಳ ಉತ್ಪಾದನೆ!
ರಾಜ್ಯ ಪರಿಸರ ಮತ್ತು ಜೀವಪರಿಸರ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ನಡೆಸಿರುವ ಮೌಲ್ಯಮಾಪನದ ಪ್ರಕಾರ, ಕೇವಲ ಸರ್ಕಾರಿ ಕಾರ್ಯಕ್ರಮಗಳು ಮತ್ತು ಕಚೇರಿಗಳಿಂದಲೇ ವರ್ಷಕ್ಕೆ ಬರೋಬ್ಬರಿ 2 ಕೋಟಿಗೂ ಹೆಚ್ಚು ಏಕಬಳಕೆಯ ಪ್ಲಾಸ್ಟಿಕ್ ಬಾಟಲಿಗಳು ತ್ಯಾಜ್ಯವಾಗಿ ಸಂಗ್ರಹವಾಗುತ್ತಿವೆ! ಪರಿಸರದ ಮೇಲಾಗುತ್ತಿರುವ ಈ ಭೀಕರ ದುಷ್ಪರಿಣಾಮವನ್ನು ತಡೆಯಲು ಈ ಹಿಂದೆಯೇ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು. ಆದರೂ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿರುವ ಕಾರಣ, ಜವಾಬ್ದಾರಿಯುತ ಸಂಸ್ಥೆಯಾದ KSPCB ಈಗ ಕಠಿಣ ನಿಲುವಿಗೆ ಮುಂದಾಗಿದೆ.
ಇದನ್ನೂ ಓದಿ:
ಪರಿಸರ ಸ್ನೇಹಿ ಪರ್ಯಾಯ ಬಳಕೆಗೆ ಸೂಚನೆ
ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಕಚೇರಿಗಳಲ್ಲಿ ಗಾಜಿನ ಬಾಟಲಿಗಳು ಮತ್ತು ಲೋಟಗಳು ,ಸ್ಟೀಲ್ ಪಾತ್ರೆಗಳು ಮತ್ತು ವಾಟರ್ ಡಿಸ್ಪೆನ್ಸರ್‌ಗಳು ಸರ್ಕಾರಿ ಸಭೆಗಳಲ್ಲಿ ಕಡ್ಡಾಯವಾಗಿ ಪರಿಸರ ಸ್ನೇಹಿ ಸಾಮಗ್ರಿಗಳು ಹಾಗೂ ಕೆಎಂಎಫ್ ನಂದಿನಿ ಉತ್ಪನ್ನಗಳನ್ನೇ ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ.
ಕಠಿಣ ಕ್ರಮದ ಎಚ್ಚರಿಕೆ
ಸರ್ಕಾರಿ ಇಲಾಖೆಗಳೇ ನಿಯಮ ಪಾಲಿಸದಿದ್ದರೆ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು KSPCB ಕಳವಳ ವ್ಯಕ್ತಪಡಿಸಿದೆ. ಇನ್ಮುಂದೆ ಯಾವುದೇ ಕಚೇರಿ ಅಥವಾ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಕಂಡುಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದಡಿ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.



