ಬೆಂಗಳೂರು ಚಿತ್ರೋತ್ಸವ: ರಾಜ್ಯ ಸರಕಾರದಿಂದ 4.49 ಕೋಟಿ ಅನುದಾನ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಬೆಂಗಳೂರು ಸಿನಿಮೋತ್ಸವ’ದ (BIFFES) 14ನೇ ಆವೃತ್ತಿಗೆ ಸಿದ್ಧತೆಗಳು ನಡೆಯುತ್ತಿವೆ. ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಆರ್​. ಅಶೋಕ್​ , ‘14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ (14th Bengaluru International Film Festival) ಸಲುವಾಗಿ ಕರ್ನಾಟಕ ಸರ್ಕಾರದಿಂದ 4.49 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೇ, ಈ ಸಿನಿಮೋತ್ಸವದಲ್ಲಿ ಪ್ರಶಸ್ತಿ ಗೆಲ್ಲುವ ಚಿತ್ರಗಳಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಲು ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ.

14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಕುರಿತಂತೆ ಪೂರ್ವಭಾವಿ ಸಭೆ ನಡೆಸಲಾಯಿತು. ಅದರಲ್ಲಿ ಚಿತ್ರರಂಗದ ಹಲವರು ಭಾಗಿ ಆಗಿದ್ದರು. ಅಶೋಕ್​ ಕಶ್ಯಪ್​, ಸುನೀಲ್​ ಪುರಾಣಿಕ್​, ಭಾ.ಮ. ಹರೀಶ್​, ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಮುಂತಾದವರ ಜೊತೆ ಚರ್ಚೆ ನಡೆಸಲಾಯಿತು. ಆ ಬಳಿಕ ಆರ್​. ಅಶೋಕ್​ ಸುದ್ದಿಗೋಷ್ಠಿ ನಡೆಸಿದರು.

ವಿಧಾನಸೌಧದ ಮುಂಭಾಗದಲ್ಲಿ ಮಾರ್ಚ್​ 23ರಂದು 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಬೇರೆ ಭಾಷೆಯ ಹೆಸರಾಂತ ನಟ-ನಟಿಯರನ್ನು ಅತಿಥಿಗಳನ್ನಾಗಿ ಕರೆಸಲು ಪ್ರಯತ್ನಿಸಲಾಗುತ್ತಿದೆ. ಯಾವ ಕಲಾವಿದರ ಹೆಸರು ಅಂತಿಮವಾಗಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಓರಿಯನ್​ ಮಾಲ್​ನ 11 ಪರದೆಗಳಲ್ಲಿ ಸಿನಿಮಾಗಳು ಪ್ರದರ್ಶನ ಆಗಲಿವೆ. ಅಂದಾಜು 300 ಸಿನಿಮಾಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಹಲವು ರಾಷ್ಟ್ರಗಳ ಸಿನಿಮಾಗಳನ್ನು ನೋಡುವ ಅವಕಾಶ ಸಿನಿಮಾಸಕ್ತರಿಗೆ ಸಿಗಲಿದೆ. ಇತ್ತೀಚೆಗೆ ನಿಧನರಾದ ಕೆ. ವಿಶ್ವನಾಥ್​, ವಾಣಿ ಜಯರಾಂ ಅವರಿಗೆ ನಮನ ಸಲ್ಲಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!