ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂವಿಧಾನದ 370 ನೇ ವಿಧಿಯನ್ನು ಜಾರಿಗೊಳಿಸುವ ನಿರ್ಣಯವನ್ನು ಬೆಂಬಲಿಸುವ ಬ್ಯಾನರ್‌ಗಳನ್ನು ಹಾಕಿದ ನಂತರ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ದೊಡ್ಡ ಕೋಲಾಹಲ ಉಂಟಾಯಿತು. ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹಮದ್ ಬ್ಯಾನರ್ ಹಿಡಿದಿದ್ದರು. ಇದಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾನರ್ ಕಿತ್ತುಕೊಳ್ಳಲು ಯತ್ನಿಸಿದ ಬಿಜೆಪಿ, ಪಿಡಿಪಿ ಮತ್ತು ಎನ್‌ಸಿ ಶಾಸಕರ ನಡುವೆ ಘರ್ಷಣೆ ನಡೆಯಿತು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಕೇಳುವ ನಿರ್ಣಯವನ್ನು ಅಂಗೀಕರಿಸಿತು.
ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಗೊತ್ತುವಳಿ ಮಂಡಿಸಿದ ಉಪಮುಖ್ಯಮಂತ್ರಿ ಸುರಿಂದರ್ ಚೌದರಿ ಅವರು, ವಿಶೇಷ ಸ್ಥಾನಮಾನದ ಮಹತ್ವ ಮತ್ತು ರಾಜ್ಯದ ಜನರ ಹೆಗ್ಗುರುತು, ಸಂಸ್ಕೃತಿ ಹಾಗೂ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ಗ್ಯಾರಂಟಿಯನ್ನು ಈ ವಿಧಾನಸಭೆ ದೃಢೀಕರಿಸುತ್ತದೆ. ಇಂತಹ ವಿಶೇಷ ಸ್ಥಾನಮಾನವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದ ಕ್ರಮದ ಕುರಿತು ಕಳವಳ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದರು.