ಗೋಧಿ ರಫ್ತು ತಡೆ ಮರುಪರಿಶೀಲಿಸುವಂತೆ ಭಾರತಕ್ಕೆ ಜಿ-7 ನಾಯಕರ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೂಡಲೇ ಗೋಧಿ ರಫ್ತು ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಜಿ-7 ರಾಷ್ಟ್ರಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. G-7 ದೇಶಗಳ ವಿದೇಶಾಂಗ ಸಚಿವರು ಮೂರು ದಿನಗಳ ಕಾಲ ವಿಶ್ವದಾದ್ಯಂತ ಪ್ರಸ್ತುತ ಪರಿಸ್ಥಿತಿಯನ್ನು ಚರ್ಚಿಸಲು ಸಭೆ ನಡೆಸಿದರು. ಉಕ್ರೇನ್-ರಷ್ಯಾ ಯುದ್ಧ, ಜಾಗತಿಕ ಆಹಾರ ಭದ್ರತೆ, ಇಂಧನ ಭದ್ರತೆ, ರಷ್ಯಾಕ್ಕೆ ಚೀನಾದ ಬೆಂಬಲ, ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಗಳು ಮತ್ತು ಭಾರತದಲ್ಲಿ ಚಂಡಮಾರುತ ತೀವ್ರತೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು. ಉಕ್ರೇನ್‌ನಲ್ಲಿ ಯುದ್ಧದಿಂದಾಗಿ ಆಹಾರ ಧಾನ್ಯ ರಫ್ತು ಇಲ್ಲದೆ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ತೀವ್ರ ಆಹಾರದ ಕೊರತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ವಿಶ್ವವೇ ಜಾಗತಿಕ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಭಾರತವು ಗೋಧಿ ರಫ್ತಿನ ಮೇಲೆ ನಿಷೇಧ ಹೇರುವುದು ಸೂಕ್ತವಲ್ಲ, ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಜರ್ಮನಿಯ ಕೃಷಿ ಸಚಿವ ಸೆಮ್ ಒಜ್ಡೆಮಿರ್ ಹೇಳಿದ್ದಾರೆ. ವಿಶ್ವದ ಅತಿ ದೊಡ್ಡ ಗೋಧಿ ರಫ್ತುದಾರ ಉಕ್ರೇನ್, ಪ್ರಸ್ತುತ ಯುದ್ಧದಿಂದಾಗಿ ಬೆಳೆ ವೈಫಲ್ಯದಿಂದ ತತ್ತರಿಸಿದೆ. ಆಹಾರದ ಕೊರತೆಗೆ ರಷ್ಯಾ ಸಂಪೂರ್ಣ ಹೊಣೆಯಾಗಲಿದೆ ಎಂದರು.

ಪ್ರತಿಯೊಂದು ದೇಶವೂ ಆಹಾರ ಧಾನ್ಯಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಿದರೆ, ಇತರ ದೇಶಗಳ ಜನರು ಹಸಿವಿನಿಂದ ಬಳಲುತ್ತಾರೆ, ಇದು ಬಿಕ್ಕಟ್ಟಿಗೆ ಕಾರಣವಾಗುತ್ತದೆ. G-20 ಸದಸ್ಯರಾಗಿ ಜಗತ್ತಿಗೆ ಆಹಾರವನ್ನು ಒದಗಿಸುವ ಜವಾಬ್ದಾರಿಯನ್ನು ಭಾರತ ತೆಗೆದುಕೊಳ್ಳಬೇಕು ಮತ್ತು ಭಾರತ ಸರ್ಕಾರವು ತನ್ನ ಗೋಧಿ ರಫ್ತುಗಳನ್ನು ಮರು ಪರಿಶೀಲಿಸಬೇಕೆಂದು ಸೆಮ್ ಓಜ್ಡೆಮಿರ್ ಕರೆ ನೀಡಿದರು. ಈಗಾಗಲೇ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಇದೆ. ಹಾಗಾಗಿ ಗೋಧಿ ರಫ್ತಿನ ಬಗ್ಗೆ ಭಾರತವು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಒಜ್ಡೆಮಿರ್ ಒತ್ತಾಯಿಸಿದರು. ಜರ್ಮನಿಯಲ್ಲಿ ನಡೆಯಲಿರುವ ಜಿ-7 ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಗೋಧಿ ರಫ್ತು ಕುರಿತು ಚರ್ಚಿಸಲು ಆಹ್ವಾನಿಸುವುದಾಗಿ ತಿಳಿಸಿದರು.

ಜಿ-7 ರಾಷ್ಟ್ರಗಳ ಪ್ರತಿನಿಧಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಭಾರತವು ಪ್ರಪಂಚದ ಇತರ ಭಾಗಗಳಿಗೆ ಗೋಧಿ ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ ಮತ್ತು ಈ ಹಿಂದೆ ಇದ್ದ ದೇಶಗಳಿಗೆ ಸಹಾಯ ಹಸ್ತ ಚಾಚುವುದನ್ನು ಮುಂದುವರಿಸುತ್ತದೆ. ಆಹಾರ ಭದ್ರತೆಗಾಗಿ ಅವಲಂಬಿಸಿರುವ ಆಯಾ ದೇಶಗಳಿಗೆ ಗೋಧಿ ರಫ್ತು ಹಿಂದಿನ ಒಪ್ಪಂದದ ಪ್ರಕಾರ ಮುಂದುವರಿಯುವ ನಿರೀಕ್ಷೆಯಿದೆ. ವಿಶ್ವದಾದ್ಯಂತ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ಗೋಧಿ ದರ ಏರುತ್ತಿರುವ ಕಾರಣ ದೇಶೀಯ ಬೆಲೆಗಳನ್ನು ನಿಯಂತ್ರಿಸಲು ಮಾತ್ರ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ ಎಂದು ಹರ್ದೀಪ್ ಸಿಂಗ್ ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!