ತ್ರಿಪುರಾದ ಹೊಸ ಮುಖ್ಯಮಂತ್ರಿ ಬಗ್ಗೆ ನಿಮಗೆಷ್ಟು ಗೊತ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲವ್‌ ದೇವ್‌ ಅವರು ರಾಜೀನಾಮೆ ನೀಡಿದ ನಂತರ 69 ವರ್ಷದ ಮಾಣಿಕ್‌ ಸಹಾ ಆ ಸ್ಥಾನವನ್ನು ಅಲಂಕರಿಸಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಸಹಾ ರಾಜಕೀಯವಾಗಿ ಬೆಳೆದು ಬಂದಿರುವ ರೀತಿ ವಿಶಿಷ್ಟವಾಗಿದೆ.

ಮಾಣಿಕ್‌ ಸಹಾರವರ ತಂದೆ ಮಖನ್‌ ಲಾಲ್‌ ತ್ರಿಪುರಾದ ಪ್ರಸಿದ್ದ ಉದ್ಯಮಿಯಾಗಿದ್ದರು. ಆದ್ದರಿಂದ ಜನರಿಗೆ ಸಹಜವಾಗಿಯೇ ಸಹಾರವರ ಪರಿಚಯವಿತ್ತು. ವೃತ್ತಿಯಿಂದ ಶಸ್ತ್ರಚಿಕಿತ್ಸಕರಾಗಿರುವ ಸಹಾರವರ ಶೈಕ್ಷಣಿಕ ಹಿನ್ನೆಲೆಯೂ ಉತ್ತಮವಾಗಿದೆ. ಪಾಟ್ನಾದ ಸರ್ಕಾರಿ ದಂತವೈದ್ಯಕೀಯ ಕಾಲೇಜಿನಲ್ಲಿ ಡೆಂಟಲ್ ಸ್ಟಡೀಸ್‌ನಲ್ಲಿ ಪದವಿ ಪಡೆದಿರುವ ಅವರು ವಿಶ್ವ ವಿದ್ಯಾಲಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ. 1995 ರಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರದಲ್ಲಿ ತ್ರಿಪುರಾ ವೈದ್ಯಕೀಯ ಕಾಲೇಜು ಮತ್ತು ಡಾ ಬಿ ಆರ್ ಅಂಬೇಡ್ಕರ್ ಬೋಧನಾ ಆಸ್ಪತ್ರೆಯಲ್ಲಿ ದಂತ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ. ಇದುವರೆಗೆ ಅನೇಕ ಕಡೆ ಗೌರವಕ್ಕೆ ಪಾತ್ರರಾಗಿರುವ ಅವರಿಗೆ ಭಾರತೀಯ ದಂತ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ.

ಡಿಸೆಂಬರ್‌ 11, 2016 ರಂದು ಬಿಜೆಪಿಗೆ ಸೇರ್ಪಡೆಗೊಂಡ ಮಾಣಿಕ್‌ ಸಹಾ ಅವರ ಆಗಮನವು ಆ ಸಂದರ್ಭದಲ್ಲಿ ಹೆಚ್ಚು ಸುದ್ದಿ ಮಾಡಲಿಲ್ಲವಾದರೂ ಮುಂದಿನ ದಿನಗಳಲ್ಲಿ ತ್ರಿಪುರಾದಲ್ಲಿ ಬೆಳೆಯುತ್ತಿದ್ದ ಬಿಜೆಪಿಗೆ ಬಲ ತುಂಬಲು ಸಹಾಯಕವಾಯಿತು.
ವೃತ್ತಿಯಿಂದ ಒಬ್ಬ ದಂತ ಶಸ್ತ್ರಚಿಕಿತ್ಸಕರಾಗಿರುವ ಸಹಾ ಮೊದಮೊದಲು ಅನುಭವ ಇಲ್ಲದೇ ಹೊಸಬರಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸಿದರು. ಸುದೀರ್ಘ ರಾಜಕೀಯ ಅನುಭವವುಳ್ಳ ದಿಗ್ಗಜರ ನಡುವೆ ಕ್ರಮೇಣ ಅವರ ಪ್ರಭಾವ ಪಕ್ಷದಲ್ಲಿ ಬೆಳೆಯಿತು. ನಂತರ ಅವರನ್ನು ಬಿಜೆಪಿ ಚುನಾವಣಾ ಯಂತ್ರದ ʼಪ್ರಷ್ಟ ಪ್ರಮುಖʼ ಸ್ಥಾನಕ್ಕೆ ಏರಿಸಲಾಯಿತು. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ವಿಪ್ಲವ್‌ ದೇಬ್‌ ಅವರ ವಿರುದ್ಧ ಉಳಿದವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದಾಗಲೂ ಮಾಣಿಕ್‌ ಸಹಾ ರವರು ನಿಷ್ಠಾವಂತರ ಸಾಲಿನಲ್ಲಿಯೇ ಉಳಿದುಕೊಂಡಿರು. ಇದು ಅವರಿಗೆ ಮುಂದೆ ಧನಾತ್ಮಕವಾಗಿ ಪರಿಣಮಿಸಿತು.

ಸಹಾ ಅವರ ಪಕ್ಷ ನಿಷ್ಠೆ ಮತ್ತು ಅವರ ಕಳಂಕರಹಿತ ವ್ಯಕ್ತಿತ್ವದಿಂದಾಗಿ ಅವರು ಶ್ರೀಮಂತವಾಗಿದ್ದ ತ್ರಿಪುರಾ ಕ್ರಿಕೆಟ್‌ ಅಸೋಸಿಯೇಷನ್ ನ ಅಧ್ಯಕ್ಷರಾದರು. ಅವರು ಒಬ್ಬ ಉತ್ತಮ ಅಥ್ಲೀಟ್‌ ಕೂಡ ಹೌದು. ವಿದ್ಯಾರ್ಥಿ ಜೀವನದಲ್ಲಿ ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಅವರು 1970 ರಲ್ಲಿ ಅತ್ಯುತ್ತಮ ಎನ್‌ಸಿಸಿ ಕೆಡೆಟ್ ಎಂದು ಕರೆಸಿಕೊಂಡಿದ್ದರು.

ಜನವರಿ 2020 ರಲ್ಲಿ ತ್ರಿಪುರಾ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪಕ್ಷದಲ್ಲಿ ಅವರ ಪ್ರಭಾವ ಇನ್ನೂ ಹೆಚ್ಚಾಯಿತು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ 2022ರ ಮಾರ್ಚ್‌ ನಲ್ಲಿ ರಾಜ್ಯದಿಂದ ಆಯ್ಕೆಯಾದ ಮೊದಲ ಬಿಜೆಪಿ ರಾಜ್ಯಸಭಾ ಸದಸ್ಯರು ಎಂಬ ಹೆಗ್ಗಳಿಕೆಯೂ ಅವರಿಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!