September 26, 2026
Saturday, September 26, 2026
spot_img

ಬಸವಕಲ್ಯಾಣ ಹಿಂದು ಸಮಾವೇಶಕ್ಕೆ ತಡೆ: ಜಿಲ್ಲಾಧಿಕಾರಿಗೆ ಮನವಿ, ನ್ಯಾಯಾಂಗ ತನಿಖೆಗೆ ಆಗ್ರಹ

ಹೊಸದಿಗಂತ ಬೀದರ್:

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಜೂನ್ 28 ರಂದು ಆಯೋಜಿಸಲಾಗಿದ್ದ ‘ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ’ಕ್ಕೆ ತಾಲ್ಲೂಕು ಆಡಳಿತ ಅನುಮತಿ ನಿರಾಕರಿಸಿದೆ. ಆಡಳಿತದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಸಮಾಜ ಸೇವಕ ಗುರುನಾಥ ವಡ್ಡೆ ಅವರು, ಈ ಕುರಿತು ಸಮಗ್ರ ನ್ಯಾಯಾಂಗ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಮನವಿ ಸಲ್ಲಿಸಿದ್ದಾರೆ.

ಮೂಲಭೂತ ಹಕ್ಕುಗಳ ಉಲ್ಲಂಘನೆ ಆರೋಪ

ಗುರುನಾಥ ವಡ್ಡೆ ಅವರು ಸಲ್ಲಿಸಿರುವ ಮನವಿಯಲ್ಲಿ, ತಾಲ್ಲೂಕು ಆಡಳಿತದ ಕ್ರಮವು ಭಾರತೀಯ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದೆ ಎಂದು ಆಪಾದಿಸಿದ್ದಾರೆ. ಸಮಾವೇಶಕ್ಕೆ ತಡೆ ನೀಡಿರುವುದು ಸಂವಿಧಾನದ ಅನುಚ್ಛೇದ 19(1)(ಎ) ಅಡಿ ನೀಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯ, 19(1)(ಬಿ) ಅಡಿ ಲಭ್ಯವಿರುವ ಶಾಂತಿಯುತ ಸಭೆ ನಡೆಸುವ ಹಕ್ಕು ಹಾಗೂ 25(1) ರ ಅಡಿಯಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ನೇರ ಉಲ್ಲಂಘನೆಯಾಗಿದೆ ಎಂದು ಅವರು ದೂರಿದ್ದಾರೆ.

ನ್ಯಾಯಾಂಗ ತನಿಖೆಗೆ ಹೆಚ್ಚಿದ ಒತ್ತಡ

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಗರಿಕರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವುದು ಸಂವಿಧಾನ ವಿರೋಧಿಯಾಗಿದೆ. ಇದರ ಹಿಂದೆ ತಾಲ್ಲೂಕು ಆಡಳಿತದ ದುರುದ್ದೇಶ ಅಡಗಿದೆ ಎಂದು ವಡ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸಮಾವೇಶಕ್ಕೆ ಅನುಮತಿ ನಿರಾಕರಿಸಿದ ಕ್ರಮದ ಹಿಂದೆ ಸಂವಿಧಾನಬದ್ಧ ಹಕ್ಕುಗಳ ಉಲ್ಲಂಘನೆ ಆಗಿದೆಯೇ ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Must Read