ಜಗಜ್ಯೋತಿ ಬಸವೇಶ್ವರರ ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕ: ಸದಾಶಿವ ಶ್ರೀ

ಹೊಸದಿಗಂತ ವರದಿ, ಮಡಿಕೇರಿ
ಹನ್ನೆರಡನೇ ಶತಮಾನದಲ್ಲಿ ಬಸವೇಶ್ವರರು ಸಾಮಾಜಿಕ ಪರಿವರ್ತನೆ ಮಾಡಿ, ಸಮಾಜದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಆ ದಿಸೆಯಲ್ಲಿ ವಿಶ್ವಜ್ಞಾನಿ, ಜಗದ ಜ್ಯೋತಿ, ಭಕ್ತಿ ಭಂಡಾರಿ ಬಸವೇಶ್ವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಾರ್ಥಕತೆ ಬರಲಿದೆ ಎಂದು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರು ಬಣ್ಣಿಸಿದ್ದಾರೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಇವರ ಸಹಕಾರದಲ್ಲಿ ನಗರದ ಭಾರತೀಯ ವಿದ್ಯಾ ಭವನದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಜಾತಿ ನಿರ್ಮೂಲನೆಗೆ ಹಾಗೂ ಸ್ತ್ರೀಯರಿಗೆ ಸಮಾನ ಅವಕಾಶ ನೀಡಲು ಬಸವೇಶ್ವರರು ಶ್ರಮಿಸಿದರು. ಇಂದಿನ ವೈಜ್ಞಾನಿಕ ಶರವೇಗದ ಬದುಕಿನಲ್ಲಿಯೂ ಜಾತಿ ನಿರ್ಮೂಲನೆಗೆ ಹಾಗೂ ಸ್ತ್ರೀಯರಿಗೆ ಸಮಾನ ಅವಕಾಶ ಕಲ್ಪಿಸಲು ಹೋರಾಟಗಳು ನಡೆಯುತ್ತಿವೆ ಎಂದರು.
ಬಸವೇಶ್ವರರು ಅನೇಕ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಜಾತಿ-ಮತ-ಪಂಥ ಪದ್ಧತಿಯ ನಿರ್ಮೂಲನೆಗೆ ಶ್ರಮಿಸಿದರು. ಆ ನಿಟ್ಟಿನಲ್ಲಿ ಬಸವೇಶ್ವರರ ಆದರ್ಶಗಳು ಇಂದಿಗೂ ದಾರಿದೀಪವಾಗಿವೆ ಎಂದು ಸದಾಶಿವ ಸ್ವಾಮೀಜಿ ಅವರು ವರ್ಣಿಸಿದರು.
ನಿವೃತ್ತ ಪ್ರಾಧ್ಯಾಪಕ ಸಿ.ಎಂ.ಧರ್ಮಪ್ಪ ಅವರು ಮಾತನಾಡಿ, ಬಸವೇಶ್ವರರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಾಮಾನ್ಯ ವ್ಯಕ್ತಿತ್ವ ಹೊಂದಿದ್ದರು. ಸಮಾಜದ ಸುಧಾರಣೆ ಕ್ರಾಂತಿಕಾರಕ ಬದಲಾವಣೆಗೆ ಪ್ರಯತ್ನಿಸಿದರು ಎಂದು ಅವರು ಹೇಳಿದರು.
ಅಜ್ಞಾನದ ಕಾಲದಲ್ಲಿ ಜ್ಯೋತಿ ಆಗಿ ಕಾಣಿಸಿಕೊಂಡ ಬಸವೇಶ್ವರರು, ಸ್ತ್ರೀಯರಿಗೆ ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ನೀಡಿದರು ಎಂದು ಧರ್ಮಪ್ಪ ನುಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಕಾಯಕವೇ ಕೈಲಾಸ ಎಂಬಂತೆ, ನುಡಿದಂತೆ ನಡೆಯಬೇಕು. ನಮ್ಮ ಕೆಲಸಗಳು ಮಾತನಾಡಬೇಕು ಎಂದು ಹೇಳಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಎಚ್.ವಿ.ಶಿವಪ್ಪ ಅವರು ಮಾತನಾಡಿ ಬಸವ ತತ್ವಗಳು ಇಂದಿಗೂ ಪ್ರಸ್ತುವಾಗಿದ್ದು, ಶಾಲಾ ಪಠ್ಯದಲ್ಲಿ ವಚನಗಳನ್ನು ಸೇರ್ಪಡೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಮೆರವಣಿಗೆಗೆ ಚಾಲನೆ:
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ನಗರದ ಮಹದೇವಪೇಟೆಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ವೀರಗಾಸೆ, ಗೊರವರ ಹಾಗೂ ಡೊಳ್ಳು ಕುಣಿತ ವಿವಿಧ ಜಾನಪದ ಕಲಾ ತಂಡದ ಕಲಾವಿದರು ಮೆರವಣಿಗೆಯಲ್ಲಿ ಗಮನ ಸೆಳೆದರು. ಹಲವು ಇಲಾಖೆ ಅಧಿಕಾರಿಗಳು ಇದ್ದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಂಭು, ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಪೌರಾಯುಕ್ತ ಎಸ್.ವಿ.ರಾಮದಾಸ್, ಸಮಾಜದ ಪ್ರಮುಖರು ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!