ರಾಜಸ್ಥಾನ ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಸಮರ: ಬೀದಿಗೆ ಬಂದ ಗೆಹ್ಲೋಟ್‌-ಪೈಲಟ್‌ ಜಗಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನದಲ್ಲಿ ಮತ್ತೆ ರಾಜಕೀಯ ಚದುರಂಗ ಆಟ ಶುರುವಾಗಿದ್ದು, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ನಡುವಿನ ಬಿಕ್ಕಟ್ಟು ಮತ್ತಷ್ಟು ತಾರಕಕ್ಕೇರಿದೆ.

‘ಸಚಿನ್‌ ಪೈಲಟ್‌ ಒಬ್ಬ ವಿಶ್ವಾಸಘಾತುಕ. ಅವರನ್ನು ಪಕ್ಷದ ಹೈಕಮಾಂಡ್‌ ಎಂದಿಗೂ ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ’ ಎಂದು ಗೆಹ್ಲೋಟ್‌ ಹೇಳಿಕೆಗೆ ಇದೀಗ ಪೈಲಟ್‌ ತಿರುಗೇಟು ನೀಡಿದ್ದು, ‘ರಾಜಸ್ಥಾನದಲ್ಲಿ ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ಬಿಜೆಪಿ ಸೋತು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತು’ ಎಂದು ಹೇಳಿದ್ದಾರೆ.

ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ರಾಜ್ಯದಲ್ಲಿ ಅಧಿಕಾರ ಸಿಕ್ಕಿತು. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಸೋತಿತು. ಆದರೂ, ಪಕ್ಷವು ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಲು ಅವಕಾಶ ನೀಡಿತು. ಈಗ ಯಾವ ರೀತಿಯ ಗೆಲುವು ನಮ್ಮದಾಗುತ್ತದೆ, ಯಾರಿಂದ ಗೆಲುವು ಸಾಧಿಸುತ್ತೇವೆ ಎಂಬುದನ್ನು ಗಮನಿಸಿ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ಒಂದೆಡೆ ಇಬ್ಬರ ನಡುವೆ ಮಾತಿನ ಸಮರ ನಡೆಯುತ್ತಿದ್ದರೆ, ಇತ್ತ ಗೆಹ್ಲೋಟ್‌ ಹಾಗೂ ಪೈಲಟ್‌ ನಡುವಿನ ಬಿಕ್ಕಟ್ಟು ಶಮನಗೊಳಿಸಲು ಹೈಕಮಾಂಡ್‌ ಮುಂದಾಗಿದೆ.

‘ಅಶೋಕ್‌ ಗೆಹ್ಲೋಟ್‌ ಅವರು ಒಬ್ಬ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಎಲ್ಲರೂ ಭಾರತ್‌ ಜೋಡೋ ಯಾತ್ರೆಯನ್ನು ಉತ್ತರ ಭಾರತದಲ್ಲಿ ಮತ್ತಷ್ಟು ಯಶಸ್ವಿಗೊಳಿಸುವತ್ತ ಮಾತ್ರ ಗಮನ ಹರಿಸಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!