ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2025-26ನೇ ಸಾಲಿನ ಬಜೆಟ್ 15,000 ಕೋಟಿ ರೂಪಾಯಿಗೆ ತಲುಪುವ ಸಾಧ್ಯತೆ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಮೊದಲ ಬಾರಿಗೆ ಹಿರಿಯ ಅಧಿಕಾರಿಗಳು ವಲಯವಾರು ಬಜೆಟ್ ಮಂಡಿಸಲು ಯೋಜಿಸುತ್ತಿದ್ದಾರೆ.
ಕಳೆದ ವರ್ಷ 2024-25ರಲ್ಲಿ ಬಿಬಿಎಂಪಿ 12,369 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿತ್ತು. ಬಜೆಟ್ ಗಾತ್ರವನ್ನು 13,114 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದ್ದು, ಅನುಮೋದನೆ ನೀಡಿದಾಗ ಹೆಚ್ಚುವರಿ 745 ಕೋಟಿ ರೂಪಾಯಿಗಳನ್ನು ಒದಗಿಸುವುದಾಗಿ ಸರಕಾರ ಭರವಸೆ ನೀಡಿದೆ. ಬಜೆಟ್ ಗಾತ್ರವು ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಶೇಕಡಾ 5ರಿಂದ 8ರಷ್ಟು ಹೆಚ್ಚಾಗುತ್ತದೆ. ಪಾಲಿಕೆಯು ವಲಯವಾರು ಬಜೆಟ್ ಯೋಜನೆ ರೂಪಿಸಿರುವುದರಿಂದ ಈ ವರ್ಷ ಇದು ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ.
ಇದೇ ಮೊದಲ ಬಾರಿಗೆ ಬಿಬಿಎಂಪಿ ಇಂತಹ ಯೋಜನೆ ರೂಪಿಸಿದ್ದು, ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಯೋಜನೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಕಾಯಿದೆ-2020 ರ ಅಡಿಯಲ್ಲಿ, ಪ್ರತಿ ವಲಯದ ಉನ್ನತಾಧಿಕಾರಿಗಳನ್ನು ವಲಯವಾರು ತಯಾರಿಸಬೇಕಾದ ಬಜೆಟ್ ನ್ನು ನಿರ್ಧರಿಸಲು ನಿಯೋಜಿಸಲಾಗಿದೆ. ಇದರ ಹೊರತಾಗಿ, ಪ್ರತಿ ವಲಯವನ್ನು ನಿರ್ವಹಿಸಲು ಮತ್ತು ನಿರ್ದಿಷ್ಟ ಕಾರ್ಯಕ್ರಮಗಳು ಮತ್ತು ಕಾರ್ಯಗಳಿಗೆ ಹಣವನ್ನು ಬಿಡುಗಡೆ ಮಾಡಲು ಅಧಿಕಾರವನ್ನು ನೀಡಲಾಗಿದೆ.