SPECIAL| ಜಿಟಿ..ಜಿಟಿ..ಹನಿಯ ಜೊತೆ ನೆನಪುಗಳ ಪ್ರವಾಹ ಮಧುರ!

-ಹರೀಶ್‌ ಕೆ.ಆದೂರು

ಹೌದು ಈ ನೆನಪುಗಳೇ ಹಾಗೆ..ನಮ್ಮನ್ನು ಬಿಡದೆ ಕಾಡುತ್ತದೆ..ಕಾಡುತ್ತಲೇ ಇರುತ್ತವೆ…ಬಿಳಿ ಅಂಗಿ, ನೀಲಿ ದೊಗಲೆ ಚಡ್ಡಿ… ಕಾಲಿಗೊಂದು ಸ್ಲಿಪ್ಪರ್…‌ ಬೆನ್ನಿಗೊಂದು ಬ್ಯಾಗ್..ಒಂದೆರಡು ಪುಸ್ತಕ, ಸ್ಲೇಟ್…‌ ಇದು ನಮ್ಮ ಶಾಲಾ ದಿನಗಳು… ಕಾಸರಗೋಡು ಜಿಲ್ಲೆಯ ಆದೂರಿನಲ್ಲಿದ್ದ ಸರಕಾರೀ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಜೂನ್‌ ಒಂದರಿಂದ ಶಾಲೆ ಆರಂಭ. 31 ಬಂತೆಂದರೆ ʻನಾಳೆಯಿಂದ ಶಾಲೆ ಶುರು…ಎಂಬ ಜಪʼ!

ಮುನ್ನಾದಿನವೇ ಪುಸ್ತಕಗಳಿಗೆ ಕ್ಯಾಲಂಡರ್‌ ಹರಿದು ಬೈಂಡ್‌ ಹಾಕಿ ರೆಡಿಮಾಡುವುದೇನೂ… ಕಳೆದ ವರುಷದ ನೋಟ್ಸ್‌ ಪುಸ್ತಕದ ಉಳಿದ ಹಾಳೆಗಳನ್ನು ಒಟ್ಟು ಸೇರಿಸಿ, ದಪ್ಪ ಸೂಚಿದಾರ ಬಳಸಿ ಪುಸ್ತಕ ಮಾಡಿ ಅದಕ್ಕೊಂದು ʻರಫ್‌ ಪುಸ್ತಕʼ ಎಂಬ ಹಣೆಪಟ್ಟಿ ಕೊಟ್ಟು ಬೇಗಿಗೆ ತುರುಕಿ ಹೋಗುತ್ತಿರುವುದೇನು…ಅದೆಲ್ಲಾ ಎಣಿಸಿದರೆ ಈಗ ಬಹಳ ಮಜಾ ಎನಿಸುತ್ತದೆ.

ಜೂನ್‌ ಒಂದರ ಬೆಳಗ್ಗೆ ಏಳುವಾಗಲೇ ಜಿಟಿ ಜಿಟಿ ಮಳೆ… ಶಾಲೆ ಆರಂಭದ ದಿನದಿಂದಲೇ ಮಳೆಗಾಲ ಆರಂಭ ಎಂಬುದು ಅಲಿಖಿತ ನಿಯಮ!

ಮೊದಲ ಮಳೆ…ಮಳೆಯಲ್ಲಿ ʻಪೊಪ್ಪಿʼ ಕೊಡೆ ಹಿಡಿದು ಸಾಗುವ ಮಜವೇ ಬೇರೆ. ಗುಂಪು ಗುಂಪಾಗಿ ರಸ್ತೆ ಬದಿಯಲ್ಲಿ ನಡೆಯುತ್ತಾ ರಸ್ತೆಯಂಚಿನಲ್ಲಿ ನಿಂತಿರುತ್ತಿದ್ದ ಕೆಂಪು ಮಳೆ ನೀರನ್ನು ಕಾಲಲ್ಲಿ ಸಿಡಿಸಿ ಮುಂದೆ ಸಾಗುತ್ತಿರುವವರ ಅಂಗಿ ಒದ್ದೆಮಾಡುತ್ತಿರುವಾಗ ಸಿಗುತ್ತಿದ ಮಜವೇ ಬೇರೆ…

ನಾನು ಶಾಲೆಗೆ ಹೋಗುತ್ತಿರುವಾಗ ನಮ್ಮದು ಮುಳಿ ಹುಲ್ಲಿನ ಮಾಡಿನ ಶಾಲೆ! ಈಗ ಯಾರೂ ಅದನ್ನು ಊಹಿಸಲೂ ಸಾಧ್ಯವಿಲ್ಲ!. ಹೌದು ಆ ಮುಳಿಹುಲ್ಲಿನ ಮಾಡಿನಿಂದ ಲೆಕ್ಕ ಪಾಠಮಾಡುವಾಗ ಪಿಟಿಕ್‌ ಎಂದು ತಲೆಯ ನೆತ್ತಿಯ ಮೇಲೆ ನೀರು ಸೋರುತ್ತಿತ್ತು…! ಸರ್ವೇಶ್ವರ ಮಾಸ್ಟ್ರ ಲೆಕ್ಕ ಪಾಠಕ್ಕೂ ಪಿಟಿಕ್‌ ಎಂದು ನೀರು ಬೀಳುವುದಕ್ಕೂ ಸರಿಯಾಗುತ್ತಿತ್ತು.

ನಮ್ಮ ಶಾಲಾ ದಿನಗಳಲ್ಲೇ ಬಿಸಿಯೂಟ(ಉಚ್ಚಕ್ಕಂಞ)ವ್ಯವಸ್ಥೆಯಿರುತ್ತಿತ್ತು. ಮಧ್ಯಾಹ್ನಕ್ಕೆ ಬಿಸಿಯೂಟ. ಅದು ಬೃಹತ್‌ ಸೌದೆ ಒಲೆಯಲ್ಲಿ ಅಡುಗೆ ತಯಾರಿ. ಅಲ್ಯೂಮಿನಿಯಂ ಕಡಾಯಿಯಲ್ಲಿ ಮಧ್ಯಾಹ್ನದ ಊಟದ ಸಿದ್ದತೆ. ಗಂಜಿಯೊಂದಿಗೆ ಪಚ್ಚೆ ಹೆಸರು ಹಾಗೂ ನೀರುಳ್ಳಿ ಹಾಕಿದ ಪದಾರ್ಥ. ಅದಕ್ಕೊಂದು ಮೆಣಸಿನ ಒಗ್ಗರಣೆ. ವ್ಹಾವ್‌ ಅದರ ರುಚಿಯೇ ಬೇರೆ. ವೀರೋಜಿ ಮಾಸ್ಟ್ರ ಕನ್ನಡ ಪಿರಿಡ್‌ ಮಧ್ಯಭಾಗಕ್ಕೆ ತಲುಪುವದಕ್ಕೂ ಜ್ಯೋಯ್..ಎಂದು ಒಗ್ಗರಣೆ ಬೀಳುವುದಕ್ಕೂ ಸರಿ… ಘಮ್..ಎಂಬ ಒಗ್ಗರಣೆಯ ಪರಿಮಳ ಬಾಯಲ್ಲಿ ನೀರೂರುವಂತೆ ಮಾಡುತ್ತಿತ್ತು. ಹನ್ನೆರಡೂವರೆಯಾಗುತ್ತಲೇ ʻಉದ್ದ ಬೆಲ್!ʼ ಅಚ್ಚರಿಯೇ ಹೌದು… ಡಯ್ಯ್…ಯ್…ಯ್‌…ಎಂದು ಮೇಲಿನ ಶಾಲೆಯಿಂದ ಬೆಲ್ಲು ಕೇಳಲಾರಂಭಿಸಿದರೆ ಚೀಲದಿಂದ ತಟ್ಟೆಗಳು ಢಣ ಢಣ ಎಂದು ಸದ್ದುಮಾಡುತ್ತಾ ಹೊರಬರುತ್ತಿದ್ದವು… ಒಂದು ಕೈಯಲ್ಲಿ ಬಟ್ಟಲು ಹಿಡಿದು ಇನ್ನೊಂದು ಕೈಯ ಬೆರಳಿನಿಂದ ಅದೇ ಉದ್ದ ಬೆಲ್‌ ರೀತಿಯಲ್ಲಿ ಢಯ್…ಯ್…ಯ್‌ ಎಂದು ನಾವೆಲ್ಲಾ ಬಾರಿಸಬೇಕಾದರೆ ಮೇಸ್ಟ್ರ ಬೆತ್ತ ನಮ್ಮತ್ತ ತಿರುಗುತ್ತಿತ್ತು!

ಶುಕ್ರವಾರ ಬಂತೆಂದರೆ ನಮಗದೇನೋ ಖುಷಿ. ಶುಕ್ರವಾರ ಹನ್ನೆರಡು ಗಂಟೆಗೆ ಶಾಲೆ ಬಿಡುತ್ತಿತ್ತು. ಮಸೀದಿಗೆ ಹೋಗುವ ವಿದ್ಯಾರ್ಥಿಗಳ ಅನುಕೂಲಕ್ಕೆ ಶಾಲೆ ಬೇಗ ಬಿಡುತ್ತಿತ್ತು. ಮತ್ತೆ ಎರಡೂವರೆಗೆ ಶಾಲೆ ಆರಂಭ. ನಾಲ್ಕು ಗಂಟೆಗೆ ಶಾಲೆ ಬಿಟ್ಟರೆ ಮತ್ತೆ ಸೋಮವಾರವೇ ಶಾಲೆಗೆ!. ಶನಿವಾರ ಭಾನುವಾರ ನಮಗೆ ರಜೆ. ಕೇರಳದಲ್ಲಿ ಆ ವ್ಯವಸ್ಥೆ. ಸಂಜೆ ಚೀಲ ಬೆನ್ನಿಗೇರಿಸಿ ಮನೆಯತ್ತ ಓಡಲಾರಂಬಿಸಿದರೆ ಮನೆ ಅಂಗಳದಲ್ಲೇ ಸ್ಟಾಪ್.‌ ವ್ಹಾವ್..ಅದೆಲ್ಲಾ ಏನು ಖುಷಿ… ಈಗ ನೆನಪುಗಳು ಮಾತ್ರ…. ಸದಾ ಹಸಿರು…

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!