Friday, February 3, 2023

Latest Posts

ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ: ಸಚಿವ ನಿರಾಣಿ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುವಕರು ಸ್ವಯಂ ಉದ್ಯೋಗದಾತರಾಗಲು ನಡೆಸುತ್ತಿರುವ ‘ಉದ್ಯಮಿಯಾಗ—ಉದ್ಯೋಗ ನೀಡು’ ಕಾರ್ಯಾಗಾರ ಮುಂದುವರೆಯಲಿದ್ದು, ಆಯಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು,ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಪ್ರತಿ ಜಿಲ್ಲೆಯ 3-4 ಕೇಂದ್ರಗಳಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಬದಲು ಉದ್ಯಮ ಸ್ಥಾಪಿಸಿ ಉದ್ಯೋಗ ಕೊಡುವಂತಾಗಬೇಕು. ಅದಕ್ಕಾಗಿ ಈ ಕಾರ್ಯಾಗಾರವನ್ನು ನಡೆಸುವ ಮೂಲಕ ಅವರಿಗೆ ಸಿಗುವ ಅವಕಾಶಗಳ ಬಗ್ಗೆ ಮತ್ತು ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಾಗಾರಕ್ಕೆ 50 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ನಂತರ 40-50 ತಾಸಿನ ಆನ್‌ಲೈನ್‌ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಲಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಮುಂದುವರೆಯಲಿದೆ ಎಂದು ವಿವರಿಸಿದರು.

ಇನ್ವೆಸ್ಟ್ ಕರ್ನಾಟಕದಲ್ಲಿ 9,81, 784 ಕೋಟಿ ರು. ಬಂಡವಾಳ ಹೂಡಿಕೆ
ನವೆಂಬರ್ 2 ರಿಂದ 4 ರವರೆಗೆ ಮೂರು ದಿನಗಳ ಕಾಲ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9,81, 784 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಬಗ್ಗೆ ವಿವಿಧ ಯೋಜನೆಗಳನ್ನು ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ನಿರಾಣಿ ಮಾಹಿತಿ ನೀಡಿದರು.

ಇನ್ವೆಸ್ಟ್ ಕರ್ನಾಟಕದಿಂದ ಎಷ್ಟು ಬಂಡವಾಳ ಬಂದಿದೆ. ಅದರಿಂದ ಆದ ಲಾಭದ ಬಗ್ಗೆ ಸದಸ್ಯರು ಮಾಡಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೂರು ದಿನಗಳ ಕಾಲ ನಡೆದ ಈ ಸಮಾವೇಶದಲ್ಲಿ ಜಪಾನ್, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಹಾಗೂ ನೆದರ್ಲೆಂಡ್ ಸೇರಿದಂತೆ ಹಲವು ದೇಶಗಳ 15,000 ಪ್ರತಿನಿಧಿಗಳು ಹಾಗೂ ಸುಪ್ರಸಿದ್ಧ ಕಂಪನಿಯ ಸಿಇಓ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದರು. ಈ ಮೂಲಕ 57 ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವರು ಉತ್ತರಿಸಿದರು.

ಕಬ್ಬು ತೂಕದಲ್ಲಿ ಯಾವುದೇ ಮೋಸ ಆಗುತ್ತಿಲ್ಲ
ಇದೇ ವೇಳೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬು ತೂಕ ಮಾಡುವಾಗ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವಿರೋಧ ಪಕ್ಷಗಳ ಸದಸ್ಯರಿಗೆ ಸಚಿವ ನಿರಾಣಿ ಎಥೆನಾಲ್ ಹಾಗೂ ಸಕ್ಕರೆ ಉತ್ಪಾದನೆ ಬೆಲೆ, ಆದಾಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಇದೆ, ಹಾಗೇ ಕಬ್ಬು ತೂಕದಲ್ಲಿ ಯಾವುದೇ ಮೋಸ ಆಗುತ್ತಿಲ್ಲ. ಏಕೆಂದರೆ ಬೆಳೆಗಾರರು ಖಾಸಗಿಯಾಗಿಯೂ ತೂಕ ಮಾಡಿಸುತ್ತಾರೆ. ಹಾಗಾಗಿ, ಟನ್ ಗಟ್ಟಲೇ ಮೋಸ ಆಗುವುದಿಲ್ಲ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!