ವಿಶ್ವದ ಟಾಪ್-5 ವಿಸಿ ಫಂಡಿಂಗ್ ಹಬ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಲಂಡನ್‌ನಲ್ಲಿ ಬಿಡುಗಡೆಯಾದ ಹೊಸ ಸಂಶೋಧನೆಯ ಪ್ರಕಾರ 2021ರ ವರ್ಷವು ಭಾರತದಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ (ವಿಸಿ) ತಂತ್ರಜ್ಞಾನ ವಲಯದ ಹೂಡಿಕೆಗಳಿಗೆ ದಾಖಲೆಯಾಗಿದೆ. ಇದರೊಂದಿಗೆ ಭಾರತವು 2020ರಲ್ಲಿ ಜಾಗತಿಕವಾಗಿದ್ದ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ.

ಲಂಡನ್ & ಪಾರ್ಟ್‌ನರ್ಸ್ ಮತ್ತು ಡೀಲ್‌ರೂಮ್ ಡಾಟ್ ಕೋ (Dealroom.Co) ಜಂಟಿಯಾಗಿ ನಡೆಸಿದ ವಿಶ್ಲೇಷಣೆಯಲ್ಲಿ ಬೆಂಗಳೂರು ಭಾರತದ ಟೆಕ್ ಚಾರ್ಜ್ ಅನ್ನು ಮುನ್ನಡೆಸಿರುವುದು ದೃಢಪಟ್ಟಿದೆ. ಅಲ್ಲದೇ ಬೆಂಗಳೂರು $ 18.6 ಶತಕೋಟಿಗಳಷ್ಟು ಹೂಡಿಕೆಯನ್ನು ಆಕರ್ಷಿಸುವ ಮೂಲಕ ಟೆಕ್ ವೆಂಚರ್ ಕ್ಯಾಪಿಟಲಿಸ್ಟ್ ಹೂಡಿಕೆಗಾಗಿ ವಿಶ್ವದ ಅಗ್ರ ಜಾಗತಿಕ ನಗರಗಳಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ.

ಒಂದೇ ವರ್ಷದಲ್ಲಿ 3ಪಟ್ಟು ಹೆಚ್ಚಳ:
ಭಾರತೀಯ ಟೆಕ್ ವಿಸಿ ಹೂಡಿಕೆಯು 2020ರಲ್ಲಿ $ 14.9 ಶತಕೋಟಿಯಿಂದ 2021ಲ್ಲಿ $ 44.6 ಶತಕೋಟಿಗೆ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಒಂದು ವರ್ಷದಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇದೇ ರೀತಿ ವಿಶ್ವದಾದ್ಯಂತ ಹೂಡಿಕೆಯು $ 675 ಶತಕೋಟಿಗೆ ದಾಖಲೆಯ ಏರಿಕೆ ಕಂಡಿದೆ.

ಯುಕೆಯನ್ನು ಹಿಂದಿಕ್ಕಿದ ಭಾರತ:
ಯುಕೆ $ 39.8 ಶತಕೋಟಿಗಳೊಂದಿಗೆ ಭಾರತದ ನಂತರ ನಾಲ್ಕನೇ ಸ್ಥಾನದಲ್ಲಿದೆ. ರಾಜಧಾನಿ ಲಂಡನ್ ಸಹ $ 25.5 ಶತಕೋಟಿಗಳೊಂದಿಗೆ ವಿಶ್ವದ ಟಾಪ್ ಟೆಕ್ ಹಬ್ ಆಗಿ, ಬೆಂಗಳೂರಿಗಿಂತ ಒಂದು ಸ್ಥಾನ ಮೇಲೆ ಅಂದರೆ ನಾಲ್ಕನೇ ಸ್ಥಾನದಲ್ಲಿದೆ.

2021ರಲ್ಲಿ ಯುಕೆ ಮತ್ತು ಭಾರತಕ್ಕೆ ಸಂಬಂಧಿಸಿದ ದಾಖಲೆ ಮತ್ತು ಬಂಡವಾಳ ಹೂಡಿಕೆ ಅಂಕಿ ಅಂಶಗಳು, ಎರಡೂ ದೇಶಗಳಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರ ಅಭಿವೃದ್ಧಿ ಹೊಂದುತ್ತಿವೆ ಎಂಬುದನ್ನು ತೋರಿಸುತ್ತವೆ. ಹೆಚ್ಚುತ್ತಿರುವ ಯುನಿಕಾರ್ನ್‌ಗಳು ಮತ್ತು ಅತ್ಯಾಕರ್ಷಕ ಟೆಕ್ ಸ್ಟಾರ್ಟ್‌ಅಪ್‌ಗಳೊಂದಿಗೆ, ಲಂಡನ್ ಮತ್ತು ಬೆಂಗಳೂರಿನಂತಹ ನಗರಗಳು ಈಗ ವಿಸಿಗಳಿಂದ ಹೂಡಿಕೆ ಮಾಡಲು ಆಟ ಬದಲಾಯಿಸುವ (ಗೇಮ್ ಚೇಂಜಿಂಗ್) ಕಂಪನಿಗಳನ್ನು ಹುಡುಕಲು ಅತ್ಯುತ್ತಮ ಸ್ಥಳಗಳಾಗಿ ಗುರುತಿಸಿವೆ ಎಂದು ಲಂಡನ್‌ನ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ಏಜೆನ್ಸಿಯ ಮೇಯರ್, ಲಂಡನ್ & ಪಾರ್ಟ್‌ನರ್ಸ್ ಭಾರತದ ನಿರ್ದೇಶಕ ಹೆಮಿನ್ ಭರುಚಾ ಅಭಿಪ್ರಾಯಪಟ್ಟಿದ್ದಾರೆ.

ಸಾಧನೆ ಶ್ಲಾಘಿಸಿದ ಕೇಂದ್ರ ಸಚಿವರು:
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ, ‘ಭಾರತೀಯ ಆವಿಷ್ಕಾರ(ಇನ್ನೋವೇಶನ್)ದಲ್ಲಿ ಹೂಡಿಕೆ ಮಾಡಲಾಗುತ್ತಿದೆ. 2021ರಲ್ಲಿ ವಿಶ್ವದಾದ್ಯಂತ ಟಾಪ್ 5 ಪ್ರಮುಖ ವೆಂಚರ್ ಕ್ಯಾಪಿಟಲ್ ಫಂಡಿಂಗ್ ಹಬ್‌ಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಜಾಗತಿಕ ಹೂಡಿಕೆದಾರರ ಆಸಕ್ತಿಯನ್ನು ಆಕರ್ಷಿಸುವ ಯುನಿಕಾರ್ನ್‌ಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ ಅತ್ಯಾಕರ್ಷಕ ಟೆಕ್ ಸ್ಟಾರ್ಟ್-ಅಪ್‌ಗಳಿಗೆ ಶಕ್ತಿ ತುಂಬುವ ಪ್ರಯತ್ನ ಸರಕಾರದ್ದು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸಂತಸ ವ್ಯಕ್ತಪಡಿಸಿದ ಸಿಎಂ:
ಕೇಂದ್ರ ಸಚಿವರ ಟ್ವೀಟ್‌ಗೆ ರಿಪ್ಲೈ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘$ 18.6 ಶತಕೋಟಿ ಹೂಡಿಕೆಯೊಂದಿಗೆ ನಮ್ಮ ಬೆಂಗಳೂರು 2021ರಲ್ಲಿ ವಿಶ್ವದಾದ್ಯಂತ ಅಗ್ರ 5 ಪ್ರಮುಖ ವಿಸಿ ಫಂಡಿಂಗ್ ಹಬ್‌ಗಳಲ್ಲಿ ಸ್ಥಾನ ಪಡೆದಿದೆ ಎಂಬುದು ಹೆಮ್ಮೆಯ ವಿಷಯ. ನಮ್ಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಸೃಷ್ಟಿಸಿದ ಹೂಡಿಕೆ ಮತ್ತು ಆವಿಷ್ಕಾರ ಅನುಕೂಲಕರ ವಾತಾವರಣವೇ ಇದನ್ನು ಸಾಧ್ಯವಾಗಿಸಿದೆ’ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!