ಪ್ರೋ ಕಬಡ್ಡಿಯಲ್ಲಿ ಕೆಂಪು ಗೂಳಿಗಳ ಭರ್ಜರಿ ಓಟ: ತಲೈವಾಸ್‌ ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಬುಲ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರೈಡರ್‌ ಭರತ್‌ ಹೂಡಾ ಮಿಂಚಿನ ಆಟ, ಸೌರಭ್ ನಂದಾಲ್‌ ರ ಅದ್ಭುತ ಡಿಫೆನ್ಸ್‌ ಕೌಶಲ್ಯಗಳ ಬಲದಿಂದ ತಮಿಳ್ ತಲೈವಾಸ್ ವಿರುದ್ಧ 40-34 ಅಂತರದ ಜಯಗಳಿಸಿದ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ 2022 ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಮರಳಿದೆ.
ತಮಿಳ್ ತಲೈವಾಸ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಪಾಯಿಂಟ್ ಪಟ್ಟಿಯಲ್ಲಿ 5 ಅಂಕಗಳನ್ನು ಸೇರ್ಪಡೆಗೊಳಿಸುವ ಮೂಲಕ ಅ ಪುಣೇರಿ ಪಲ್ಟನ್ ಅನ್ನು ಹಿಂದಿಕ್ಕಿದೆ. 13 ಪಂದ್ಯಗಳನ್ನಾಡಿರುವ ಬುಲ್ಸ್‌ 8 ಜಯ 4 ಸೋಲು ಒಂದು ಟೈ ನೊಂದಿಗೆ ಒಟ್ಟು 46 ಅಂಕಗಳನ್ನು ಕಲೆಹಾಕಿ ಮೊದಲ ಸ್ಥಾನದಲ್ಲಿದೆ. ಪುಣೆ 13 ಪಂದ್ಯಗಳಲ್ಲಿ 44 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಪಂದ್ಯದ ಮೊದಲಾರ್ಧ ಮುಗಿದಾಗ 18-19 ರಲ್ಲಿ ಹಿನ್ನಡೆಯಲ್ಲಿದ್ದ ಬುಲ್ಸ್‌ ದ್ವಿತೀಯಾರ್ಧದಲ್ಲಿ ಅತ್ಯುತ್ತಮವಾಗಿ ಕಂಬ್ಯಾಕ್‌ ಮಾಡಿತು. ಅದರಲ್ಲೂ ಕೊನೆ 5 ನಿಮಿಷ ಬುಲ್ಸ್‌ ಆಟ ಚೇತೋಹಾರಿಯಾಗಿತ್ತು. ತಂಡದ ಸ್ಟಾರ್‌ ರೈಡರ್‌ ಭರತ್ ಹೂಡಾ 14 ಅಂಕ ಕಲೆಹಾಕಿ ಮತ್ತೊಮ್ಮೆ ಮಿಂಚಿದರೆ, ಎಡ ಮೂಲೆಯ ಡಿಫೆಂಡರ್ ಸೌರಭ್ ನಂದಲ್ 5 ಅಂಕ ಗಳಿಸಿ ಉತ್ತಮ ಕೊಡುಗೆ ನೀಡಿದರು. ಸಪೋರ್ಟಿಂಗ್‌ ರೈಡರ್ ನೀರಜ್ ನರ್ವಾಲ್ ಆರು ಅಂಕಗಳನ್ನು ಕಲೆಹಾಕುವ ಮೂಲಕ ಉತ್ತಮ ಬೆಂಬಲ ನೀಡಿದರು. ತಮಿಳ್ ತಲೈವಾಸ್‌ ಪರ ನರೇಂದರ್ ಸೂಪರ್ 10 ಗಳಿಸಿದರು. ಆದರೆ ಅವರಿಗೆ ಇತರರಿಂದ ಯಾವುದೇ ಬೆಂಬಲ ಸಿಗಲಿಲ್ಲ. ಸತತ ಎರಡು ಸೋಲುಗಳೊಂದಿಗೆ ತಮಿಳ್‌ ತಲೈವಾಸ್ ಟಾಪ್ 6 ಪಟ್ಟಿಯಿಂದ ಹೊರಬಿದ್ದಿದೆ. ಚೆನ್ನೈ ಮೂಲದ ಫ್ರಾಂಚೈಸಿ 13 ಪಂದ್ಯಗಳಲ್ಲಿ 35 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಮುಂದುವರಿದಿದೆ.
ಹಿಂದಿನ ಸಂಜೆ ನಡೆದ ಮತ್ತೊಂದು ಪಂದ್ಯದಲಲಿ ಯು ಮುಂಬಾ ಪಾಟ್ನಾ ಪೈರೇಟ್ಸ್ ವಿರುದ್ಧ 36-23 ಅಂತರದ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು.
ಪಾಟ್ನಾ ಪೈರೇಟ್ಸ್ ವಿರುದ್ಧದ ಗೆಲುವಿನ ನಂತರ ಯು ಮುಂಬಾ 13 ಪಂದ್ಯಗಳಿಂದ 43 ಅಂಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ. ಆದಾಗ್ಯೂ, ಪೈರೇಟ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಮುಂದುವರಿದಿದೆ.
ಇಂದು ಪಿಕೆಎಲ್ 2022 ರಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಎರಡನೇ ಸ್ಥಾನದಲ್ಲಿರುವ ಪುಣೇರಿ ಪಲ್ಟನ್ ಮಣಿಂದರ್ ಸಿಂಗ್ ಅವರ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೆಣಸಲಿದೆ. ನಾಳಿನ ಪಂದ್ಯದಲ್ಲಿ ಗೆದ್ದರೆ ಪುಣೆ ನಂಬರ್ ಒನ್ ಸ್ಥಾನಕ್ಕೇರಬಹುದು.
ಎರಡನೇ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವೆ ನಡೆಯಲಿದೆ. ಸದ್ಯಕ್ಕೆ ಎರಡೂ ಫ್ರಾಂಚೈಸಿಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಗಿನ ಮೂರು ಸ್ಥಾನದಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!