5 ಪಂದ್ಯಗಳಲ್ಲಿ ಕೆಂಪುಗೂಳಿಗ‌ಳ ಅಜೇಯ ಗೆಲುವಿನ ಓಟ! ಪಾಯಿಂಟ್‌ ಟೇಬಲ್‌ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಬುಲ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಅದ್ಧೂರಿ ಪ್ರದರ್ಶನ ಮುಂದುವರಿದಿದೆ. ಪುಣೆಯ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಭಾನುವಾರ  9ನೇ ಲೀಗ್ ಪಂದ್ಯದಲ್ಲಿ ಬುಲ್ಸ್‌ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 37-31ರ ಅಂತರದಲ್ಲಿ ಭರ್ಜರಿ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಸತತ 5 ಪಂದ್ಯಗಳಲ್ಲಿ ಅಜೇಯವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಮುನ್ನುಗ್ಗುತ್ತಿದೆ.
ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಬೆಂಗಳೂರು ಬುಲ್ಸ್ ಅಗ್ರಸ್ಥಾನವನ್ನು ವಿಸ್ತರಿಸಿತು. ಭಾನುವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ತಮಿಳ್ ತಲೈವಾಸ್ ಎರಡನೇ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ವಿರುದ್ಧ 49-39 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದು ಬುಲ್ಸ್‌ ಅಗ್ರಸ್ಥಾನದಲ್ಲಿ ಮುಂದುವರೆಯಲು ನೆರವಾಗಿದೆ. ಈ ಮೂಲಕ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಸತತ 4ನೇ ಸೋಲು ಅನುಭವಿಸಿತು.
ಟೂರ್ನಿ ಆರಂಭಗೊಂಡು 4 ನೇ ವಾರದ ಅಂತ್ಯದ ವೇಳೆಗೆ, ಬೆಂಗಳೂರು ಬುಲ್ಸ್ ಒಂಬತ್ತು ಪಂದ್ಯಗಳಿಂದ 34 ಪಾಯಿಂಟ್‌ಗಳನ್ನು ಹೊಂದಿ ಟೇಬಲ್‌ ಟಾಪ್‌ ನಲ್ಲಿದೆ. ಎರಡನೇ ಸ್ಥಾನದಲ್ಲಿರುವ ದಬಾಂಗ್ ದೆಹಲಿಗಿಂತ ಆರು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ಒಂಬತ್ತು ಪಂದ್ಯಗಳಿಂದ 27 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಅದು ಕೇವಲ ಒಂದು ಅಂಕಗಳಿಂದ ಡೆಲ್ಲಿಗಿಂತ ಕೆಳಗಿದೆ.
ಪುಣೇರಿ ಪಲ್ಟಾನ್ (27), ಯು ಮುಂಬಾ(26), ಮತ್ತು ಗುಜರಾತ್ ಜೈಂಟ್ಸ್‌(24) ನಂತರದ ಸ್ಥಾನದಲ್ಲಿವೆ. ತಮಿಳ್ ತಲೈವಾಸ್ ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ ಹತ್ತನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಏರಿದೆ. ಅವರು ಈಗ ಎಂಟು ಪಂದ್ಯಗಳಿಂದ 20 ಅಂಕಗಳನ್ನು ಹೊಂದಿದ್ದಾರೆ.
ಬೆಂಗಳೂರು ಬುಲ್ಸ್ ಟೀಂ ಕಾಬಿನೇಷನ್‌ ಈ ಬಾರಿ ವರ್ಕ್‌ ಆಗುತ್ತಿದೆ. ತಂಡ ಕಳೆದ 5 ಪಂದ್ಯಗಳಿಂದ ಸೋಲನ್ನೇ ಕಂಡಿಲ್ಲ. ಅ. 16ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯು.ಪಿ ಯೋಧಾ ವಿರುದ್ಧ ಸೋತ ಬಳಿಕ ಬುಲ್ಸ್ ಅಜೇಯ ಓಟ ತಡೆರಹಿತವಾಗಿ ಸಾಗಿದೆ. ಕಳೆದ ಐದು ಪಂದ್ಯಗಳಲ್ಲಿ ಬುಲ್ಸ್ ತಂಡ ತಮಿಳ್ ತಲೈವಾಸ್ (45-28), ಯು ಮುಂಬಾ (42-32), ದಬಾಂಗ್ ಡೆಲ್ಲಿ (47-43) ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ (37-31) ವಿರುದ್ಧ ಗೆಲುವು ಸಾಧಿಸಿದ್ದು ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯವನ್ನು 31-31ರಲ್ಲಿ ಟೈ ಮಾಡಿಕೊಂಡಿತ್ತು. ಮಂಗಳವಾರ ನಡೆಯುವ ತನ್ನ 10ನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪಡೆ ಹರ್ಯಾಣ ಸ್ಟೀಲರ್ಸ್ ತಂಡದ ಜೊತೆಗೆ ಕಾದಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!