ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ, ಆರ್‌ಸಿಬಿ ಕ್ಯಾಂಪ್‌ನಲ್ಲಿ ಸಂಭ್ರಮ ಮುಗಿಯುವ ಮುನ್ನವೇ 2027 ರ ಮುಂದಿನ ಸೀಸನ್‌ಗಾಗಿ ಹೊಸ ಹಸಿವು ಮತ್ತು ದೊಡ್ಡ ಯೋಜನೆಯೊಂದು ಸಿದ್ಧವಾಗಿದೆ. ಫೈನಲ್ ಪಂದ್ಯ ಮುಗಿದ ತಕ್ಷಣ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಸಂಭಾಷಣೆ ಈಗ ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ಸವಾಲು ಎಸೆದ ಮೊ ಬೊಬಾಟ್; ಕ್ಯಾಪ್ಟನ್ ಪಾಟಿದಾರ್ ರಿಯಾಕ್ಷನ್!
ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆದ್ದ ಖುಷಿಯಲ್ಲಿದ್ದ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್, ತಂಡದ ಮುಂದೆ ಇತಿಹಾಸ ಸೃಷ್ಟಿಸುವ ಹೊಸ ಗುರಿಯನ್ನು ಇಟ್ಟಿದ್ದಾರೆ.
“ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ತಂಡವೂ ಸತತ ಮೂರು ಬಾರಿ ಟ್ರೋಫಿ ಗೆದ್ದ ದಾಖಲೆ ಬರೆದಿಲ್ಲ. ಕ್ಯಾಪ್ಟನ್, ನಿಮ್ಮ ಪ್ರಕಾರ ಏನಂತೀರಾ? ಮುಂದಿನ ವರ್ಷ ನಾವು ಮೂರನೇ ಟ್ರೋಫಿ ಗೆದ್ದು ಇತಿಹಾಸ ಬರೆಯೋಣವಾ?” ಎಂದು ಮೊ ಬೊಬಾಟ್ ಮುಗುಳ್ನಗುತ್ತಲೇ ಸವಾಲು ಹಾಕಿದರು.
ಇದಕ್ಕೆ ತಕ್ಷಣವೇ ಭರ್ಜರಿ ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿದ ನಾಯಕ ರಜತ್ ಪಾಟಿದಾರ್, “ಖಂಡಿತವಾಗಿಯೂ ನಾವು ಮುಂದಿನ ಬಾರಿಯೂ ಗೆಲ್ಲಲಿದ್ದೇವೆ!” ಎಂದು ಉತ್ತರಿಸುವ ಮೂಲಕ ಇಡೀ ತಂಡದಲ್ಲಿ ಹೊಸ ಜೋಶ್ ತುಂಬಿದರು.
ಹ್ಯಾಟ್ರಿಕ್ ಟ್ರೋಫಿ ಗೆಲ್ಲಲು ಆರ್‌ಸಿಬಿ ಮಾಸ್ಟರ್ ಪ್ಲಾನ್
ಮೊ ಬೊಬಾಟ್ ಅವರು ಟ್ರೋಫಿ ಗೆದ್ದ ತಕ್ಷಣವೇ ಮುಂದಿನ ಸೀಸನ್‌ಗೆ ಗುರಿ ನಿಗದಿಪಡಿಸುತ್ತಿರುವುದು ಇದೇ ಮೊದಲೇನಲ್ಲ. 2025 ರ ಸೀಸನ್‌ನಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಕಪ್ ಗೆದ್ದಾಗಲೂ ಅವರು ಇದೇ ತಂತ್ರ ಅನುಸರಿಸಿದ್ದರು. ಅಂದು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತನಾಡಿದ್ದ ಅವರು, “ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಬಾರಿ ಟ್ರೋಫಿ ಗೆದ್ದ ತಂಡಗಳು ಕೇವಲ ಎರಡು ಮಾತ್ರ. ಮುಂದಿನ ವರ್ಷ ಬೆಂಗಳೂರಿನಲ್ಲೇ ಫೈನಲ್ ಇರಲಿದ್ದು, ನಾವೇ ಗೆಲ್ಲಲಿದ್ದೇವೆ. ಈ ಗೆಲುವಿನ ಹಸಿವು ನಮ್ಮನ್ನು ಮುನ್ನಡೆಸಬೇಕು” ಎಂದಿದ್ದರು.
2026 ರ ಟೂರ್ನಿಯಲ್ಲಿ ರಣೋತ್ಸಾಹದಿಂದ ಆಡಿದ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಆಯಿತು. ಇದೀಗ 2027 ರ ಐಪಿಎಲ್‌ನಲ್ಲಿ ಸತತ ಮೂರನೇ ಬಾರಿ ಟ್ರೋಫಿ ಗೆದ್ದು, ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ‘ಹ್ಯಾಟ್ರಿಕ್ ಟ್ರೋಫಿ’ಯ ಮಹಾ ದಾಖಲೆ ಬರೆಯಲು ಬೆಂಗಳೂರು ಪಡೆ ಈಗಿನಿಂದಲೇ ರಣತಂತ್ರ ರೂಪಿಸುತ್ತಿದೆ.



