ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಗೆ ಕೊಡುಗೆಯಾಗಲಿದೆ : ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ರಸ್ತೆ ಕರ್ನಾಟಕದ ಬೆಳವಣಿಗೆಗೆ ಕೊಡುಗೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ರೀಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಈ ಹೆದ್ದಾರಿ ಕರ್ನಾಟಕದ ಬೆಳವಣಿಗೆಗೆ ಪೂರಕವೆಂದಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ 90 ನಿಮಿಷದಲ್ಲಿ ತಲುಪಬಹುದಾದ ಎಕ್ಸ್‍ಪ್ರೆಸ್ ವೇ ರಸ್ತೆ ಮಾ.12ರಂದು ಉದ್ಘಾಟನೆಗೆ ಸಜ್ಜಾಗಿದ್ದು, ಮೋದಿ ಅವರೇ ಖುದ್ದು ದಶಪಥ ಹೆದ್ದಾರಿಯನ್ನು ಉದ್ಘಾಟನೆ ಮಾಡಲಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಟ್ವಿಟ್ಟರ್‌ ಖಾತೆಯಲ್ಲಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣವು ರಾಷ್ಟ್ರೀಯ ಹೆದ್ದಾರಿ-275 ರ ಭಾಗವನ್ನು ಸುತ್ತುವರೆದಿದೆ. ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ಪ್ರಮುಖ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಮೇಲ್ಸೇತುವೆಗಳನ್ನು ಒಳಗೊಂಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

118 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಆರು ಮುಖ್ಯ ಪಥಗಳನ್ನು ಮತ್ತು ಎರಡೂ ಬದಿಗಳಲ್ಲಿ ಎರಡು ಸರ್ವಿಸ್ ರಸ್ತೆ ಲೇನ್‌ಗಳನ್ನು ಹೊಂದಿದೆ. ‘ಭಾರತಮಾಲಾ ಪರಿಯೋಜನೆ’ ಅಡಿಯಲ್ಲಿ ಸುಮಾರು ₹8,478 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ ಅಭಿವೃದ್ಧಿಪಡಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಮೂರು ಗಂಟೆಗಳಿಂದ ಸುಮಾರು 75 ನಿಮಿಷಗಳಿಗೆ ತಗ್ಗಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!