Sunday, December 10, 2023

Latest Posts

ವಿಚಿತ್ರ ಆಫರ್: ಹಡಗು ಕಣ್ಮರೆಯಾದಲ್ಲಿ ಪ್ರಯಾಣಿಕರಿಗೆ 100% ಮರುಪಾವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬರ್ಮುಡಾ ತ್ರಿಕೋನಕ್ಕೆ ಪ್ರಯಾಣಿಸುವ ಪ್ರಯಾಣಿಕರು ಕಣ್ಮರೆಯಾದರೆ ಭಯಪಡುವ ಅಗತ್ಯವಿಲ್ಲ ಎಂದು ಅಮೆರಿಕದ ಟ್ರಾವೆಲ್ ಏಜೆನ್ಸಿ ಏನ್ಷಿಯಂಟ್ ಮಿಸ್ಟರೀಸ್ ಕ್ರೂಸ್ ಹೇಳಿದೆ. ಬರ್ಮುಡಾ ಟ್ರಯಾಂಗಲ್‌ಗೆ ಹೋಗುವ ತಮ್ಮ ಹಡಗಿನ ಪ್ರಯಾಣಿಕರಿಗೆ 100% ಮರುಪಾವತಿ ಮಾಡುವ ವಿಚಿತ್ರ ಆಫರ್‌ ನೀಡಿದೆ. ಈ ಆಫರ್‌ ಪಡೆದವರು ನಿರ್ಭಯವಾಗಿ ಪ್ರವಾಸ ಮುಂದುವರಿಸಬಹುದು ಎಂದು ಹೇಳಿದೆ.

ಈ ಆಫರ್‌ನಿಂದಾಗಿ ಕಂಪನಿ ಸಾಕಷ್ಟು ಪ್ರಚಾರ ಪಡೆಯುತ್ತಿದೆ. ಇಂತಹ ವಿಚಿತ್ರ ಆಫರ್ ಘೋಷಿಸಿದ ಕಂಪನಿ ವಿರುದ್ಧ ಟೀಕೆಗಳೂ ಕೇಳಿ ಬರುತ್ತಿವೆ. ಬರ್ಮುಡಾ ಟ್ರಯಾಂಗಲ್‌ಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗುಗಳು ಮತ್ತು ವಿಮಾನಗಳು ಹವಾಮಾನ ವೈಪರೀತ್ಯ ಮತ್ತು ಮಾನವ ದೋಷದಿಂದಾಗಿ ನಾಪತ್ತೆಯಾಗುತ್ತಿರುವುದು ಪ್ರಪಂಚಕ್ಕೇ ತಿಳಿದಿರುವ ವಿಷಯ. ಇಂತಹ ಭಯಾನಕ ಪ್ರದೇಶಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿರುವಾಗ ಮಿಸ್ಟರೀಸ್ ಕ್ರೂಸ್ ಕಂಪನಿ ಈ ಆಫರ್ ಘೋಷಿಸಿದೆ. ಬರ್ಮುಡಾ ಟ್ರಯಾಂಗಲ್ ಪ್ರವಾಸಕ್ಕೆ ಹೋದರೆ ನಾವು ವಾಪಸ್‌ ಬರುವುದಿಲ್ಲ ಎನ್ನುವ ಭಯ ನಿಮಗೆ ಬೇಡ. ನಾವು ನಿಮಗೆ 100% ಮರುಪಾವತಿ ಕೊಡುಗೆಯನ್ನು ಘೋಷಿಸುತ್ತಿದ್ದೇವೆ, ಎಂದು ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಮುಂದಿನ ವರ್ಷ ಮಾರ್ಚ್ 28 ರಿಂದ ನ್ಯೂಯಾರ್ಕ್‌ನಿಂದ ಬರ್ಮುಡಾಕ್ಕೆ ಅಟ್ಲಾಂಟಿಕ್ ಸಾಗರದ ಮೂಲಕ ಪ್ರಯಾಣಿಸಲು ಪ್ರಯಾಣಿಕರು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಎರಡು ದಿನಗಳ ಪ್ರಯಾಣಕ್ಕೆ ಸುಮಾರು 1.20 ಲಕ್ಷ ರೂ.ಗಳನ್ನು ಪಾವತಿಸುವವರಿಗೆ  ಕ್ಯಾಬಿನ್‌ಗಳನ್ನು ನಿಗದಿಪಡಿಸಲಾಗುತ್ತದೆ. ಹಡಗು ಪತ್ತೆಯಾಗದಿದ್ದಲ್ಲಿ ಪ್ರಯಾಣಕ್ಕಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸುವುದಾಗಿ ಮಿಸ್ಟರೀಸ್ ಕ್ರೂಸ್ ಘೋಷಣೆ ಮಾಡಿದೆ. ಆದರೆ ಮನುಷ್ಯನೇ ಇಲ್ಲ ಅಂದ ಮೇಲೆ ಹಣ ಯಾರಿಗೆ ಪಾವತಿ ಮಾಡುತ್ತೀರಾ..? ಎಂಬಂತಹ ಟೀಕೆಗಳು ಕಂಪನಿ ವಿರುದ್ಧ ಕೇಳಿ ಬರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!