ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಅತ್ಯುತ್ತಮ ವಿಧಾನ ಪರಿಷತ್ತು ಮತ್ತು ವಿಧಾನ ಸಭೆ ಪ್ರಶಸ್ತಿಗೆ ಮಾನದಂಡಗಳನ್ನು ಸೂಚಿಸಲು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಪೀಠಾಸೀನಾಧಿಕಾರಿಗಳ ಸಮಿತಿ ರಚಿಸಿದ್ದು, ಅಧ್ಯಕ್ಷರನ್ನಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ನೇಮಿಸಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಕಳೆದ ನವೆಂಬರ್‌ನಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ನಡೆದ 82ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಅತ್ಯುತ್ತಮ ವಿಧಾನ ಪರಿಷತ್ತು ಮತ್ತು ವಿಧಾನ ಸಭೆ ಪ್ರಶಸ್ತಿಗೆ ಮಾನದಂಡಗಳನ್ನು ಸೂಚಿಸಲು ಸಮಿತಿ ರಚಿಸಿದ್ದಾರೆ.
ಹೆಗಡೆ ಕಾಗೇರಿ ಸಮಿತಿ ಅಧ್ಯಕ್ಷರಾಗಿದ್ದಾರೆ. ದಿಲ್ಲಿ ವಿಧಾನ ಸಭಾಧ್ಯಕ್ಷ ರಾಮ್‌ನಿವಾಸ್ ಗೋಯಲ್, ಮಹಾರಾಷ್ಟ್ರ ವಿಧಾನಪರಿಷತ್ ಸಭಾಪತಿ ರಾಮರಾಜೆ ಪ್ರಥಾಪ್‌ಸಿಂಗ್ ನಾಯಕ್ ನಿಂಬಾಳ್ಕರ್, ಬಿಹಾರ ವಿಧಾನಸಭಾಧ್ಯಕ್ಷ ವಿಜಯ್‌ಕುಮಾರ್ ಸಿನ್ಹ, ಅಸ್ಸಾಂ ವಿಧಾನಸಭಾಧ್ಯಕ್ಷ ಬಿಶ್ವಜಿತ್ ಡೈಮರಿ, ಗುಜರಾತ್ ವಿಧಾನಸಭಾಧ್ಯಕ್ಷೆ ಡಾ. ನಿಮಾಬೆನ್ ಆಚಾರ್ಯ ಮತ್ತು ತಮಿಳುನಾಡಿನ ವಿಧಾನಸಭಾಧ್ಯಕ್ಷ ಎಂ. ಅಪ್ಪಾವು ಸಮಿತಿ ಸದಸ್ಯರಾಗಿದ್ದಾರೆ.