ನಮೋ ಮತ್ತೆ ಪ್ರಧಾನಿಯಾಗಿಸಲು ಪಣ: ವಿಶಿಷ್ಟ ಅಭಿಯಾನಕ್ಕೆ ಸಜ್ಜಾಗುತ್ತಿದೆ ಮೈಸೂರು ಬಿಜೆಪಿ!

ಹೊಸದಿಗಂತ, ಮೈಸೂರು:
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನೇ ಅಧಿಕಾರಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಜಿಲ್ಲೆಯಾದ್ಯಾಂತ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಮೈಸೂರು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.
ಭಾನುವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಫೆ.೪ರಿಂದಲೇ ಗಾವ್ ಚಲೋ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಸರಳ, ನಮೋ ಆಪ್‌ಗಳನ್ನು ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಸಲಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸಿ ಕಾರ್ಯಕರ್ತರ ಪಟ್ಟಿಯನ್ನು ಮಾಡಲಾಗುವುದು. ಮಂಡಲಗಳಲ್ಲಿ ಪ್ರಶಿಕ್ಷಣ ನಡೆಯಲಿದೆ. ವಿಕಸಿತ ಭಾರತ ಅಭಿಯಾನದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ಸಾಧನೆಗಳು, ಮೋದಿಯವರು ದೇಶದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳು, ಜಾರಿಗೊಳಿಸಿರುವ ಯೋಜನೆಗಳು ಮುಂತಾದವುಗಳ ಕುರಿತು ಮಾಹಿತಿಯನ್ನು ಜನರಿಗೆ ನೀಡಲಾಗುವುದು. ಜನಸಂಘದಲ್ಲಿ ಕಾರ್ಯನಿರ್ವಹಿಸಿರುವವರು, ಆಯಾ ಪ್ರದೇಶಗಳ ಸ್ಥಳೀಯ ಮುಖಂಡರುಗಳು, ಹಾಲು ವಿತರಕರು, ಪೋಸ್ಟ್ ಮ್ಯಾನ್‌ಗಳು ಮುಂತಾದವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಸ್ವಚ್ಚ ಭಾರತ ಅಭಿಯಾನದಡಿ ಮಂಡಲಗಳ ಬೂತ್‌ಗಳಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಗುವುದು ಎಂದು ಹೇಳಿದರು.
ಪ್ರತಿಬೂತ್‌ನಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಘೋಷಣೆಗಳನ್ನು ಗೋಡೆಗಳಲ್ಲಿ ಬರೆಯುವ ಅಭಿಯಾನ ನಡೆಸಲಿದ್ದಾರೆ ಅವರು ಎಂದು ಮಾಹಿತಿ ನೀಡಿದರು.
ಶೀಘ್ರದಲ್ಲೇ ತಾಲೂಕು ಅಧ್ಯಕ್ಷರ ನೇಮಕ 
ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಈ ನಿಟ್ಟಿನಲ್ಲಿ ವೀಕ್ಷಕರು ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ, ಪಕ್ಷದ ಮುಖಂಡರು, ಕಾರ್ಯಕರ್ತರುಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಬಳಿಕ ನೇಮಕಾತಿಯ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.
ಫೆ.8ರಂದು ವಿಶೇಷ ಕಾರ್ಯಕಾರಣಿ ಸಭೆ
ನಗರದ ವಸ್ತುಪ್ರದರ್ಶನ ಆವರಣಲ್ಲಿ ಫೆ.8 ರಂದು ಪಕ್ಷದ ವಿಶೇಷ ಕಾರ್ಯಕಾರಣಿ ಸಭೆ ನಡೆಯಲಿದೆ. ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಹಾಲಿ, ಮಾಜಿ ಶಾಸಕರು, ಸಂಸದರು, ಮಾಜಿ ಸಚಿವರುಗಳು, ಜಿಲ್ಲಾ ಮಟ್ಟದಿಂದ ರಾಜ್ಯ, ರಾಷ್ಟ್ರಕ್ಕೆ ಆಯ್ಕೆಯಾಗಿರುವ ಪದಾಧಿಕಾರಿಗಳು, ಕಾರ್ಯಕಾರಣಿ ಸದಸ್ಯರುಗಳು, ಜಿಲ್ಲಾ, ತಾಲೂಕು ಪದಾಧಿಕಾರಿಗಳು ಸೇರಿದಂತೆ ಸುಮಾರು 718 ಮಂದಿ ಈ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಅಪೇಕ್ಷಿತರಾಗಿ ಪಾಲ್ಗೊಳ್ಳಲಿದ್ದಾರೆ. ಸಭೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉದ್ಘಾಟಿಸಲಿದ್ದು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಹ ವಕ್ತಾರ ವಸಂತ್ ಕುಮಾರ್ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!