ಆಡಳಿತದಲ್ಲಿ ತಂತ್ರಜ್ಞಾನದ ಬಳಕೆ ಬಡವರ ಬದುಕನ್ನು ಬದಲಿಸಿದ್ದು ಹೇಗೆ? ಡ್ರೋನ್ ಮೇಳದಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2014ಕ್ಕಿಂತ ಮೊದಲು ಆಡಳಿತದಲ್ಲಿದ್ದ ಸರ್ಕಾರಗಳಿಗೆ ತಂತ್ರಜ್ಞಾನದ ಬಳಕೆಯ ಬಗ್ಗೆ ಅಸಡ್ಡೆಯ ವಾತಾವರಣವಿತ್ತು, ಇದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯಲ್ಲಿ ಶುಕ್ರವಾರ ಭಾರತದ ಅತಿದೊಡ್ಡ ಡ್ರೋನ್ ಉತ್ಸವವನ್ನು ಉದ್ಘಾಟಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಡ್ರೋನ್ ತಂತ್ರಜ್ಞಾನದ ಬಗ್ಗೆ ಭಾರತೀಯರು ತೋರುತ್ತಿರುವ ಉತ್ಸಾಹವು ಅದ್ಭುತವಾಗಿದೆ. ಡ್ರೋನ್‌ ಗಳ ಉತ್ಪಾದನಾ ವಲಯ ಅಪಾರ ಉದ್ಯೋಗ ಸೃಷ್ಟಿಸುತ್ತಿರುವ ಉದಯೋನ್ಮುಖ ವಲಯವಾಗಿ ಬೆಳೆಯುತ್ತಿದೆ. ಭಾರತವು ಹೊಸ ತಂತ್ರಜ್ಞಾನಗಳ ಆವಿಷ್ಕರಣೆ ಹಾಗೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮಕ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ಶ್ಲಾಘಿಸಿದರು.
ಎಂಟು ವರ್ಷಗಳ ಹಿಂದೆ ನಮ್ಮ ಸರ್ಕಾರವು ಜಾರಿಗೆ ಬಂದಾಗ ನಾವು ಉತ್ತಮ ಆಡಳಿತದ ಹೊಸ ಮಂತ್ರಗಳನ್ನು ಜಾರಿಗೊಳಿಸಲು ಆದ್ಯತೆ ನೀಡಿದೆವು. ʼಜನಸಾಮನ್ಯರ ಜೀವನ ಮಟ್ಟ ಸುಧಾರಿಸಲು ಹಾಗೂ ವ್ಯವಹಾರಿಕ ಕ್ಷೇತ್ರವನ್ನು ಸರಳಗೊಳಿಸಲು ಆದ್ಯತೆ ನೀಡಲಾಯಿತು” ಎಂದು ಮೋದಿ ಹೇಳಿದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ, ತಂತ್ರಜ್ಞಾನವನ್ನು ಸಮಸ್ಯೆಯ ಒಂದು ಭಾಗವೆಂದು ಪರಿಗಣಿಸಲಾಗಿತ್ತು ಮತ್ತು ಅದನ್ನು “ಬಡವರ ವಿರೋಧಿ ಎಂದು ಸಾಬೀತಪಡಿಸಲು ಪ್ರಯತ್ನಿಸಲಾಯಿತು. 2014ರ ಮೊದಲು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ಬಗ್ಗೆ ಅಸಡ್ಡೆಯ ವಾತಾವರಣವಿದ್ದು, ಬಡವರು, ವಂಚಿತರು, ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದರು. ಇತ್ತೀಚಿನ ದಿನಗಳಲ್ಲಿ ಭಾರತವು ಸಕಾರಾತ್ಮಕ ಪ್ರಗತಿ ಸಾಧಿಸುವಲ್ಲಿ ತಂತ್ರಜ್ಞಾನವು ಸಾಕಷ್ಟು ಸಹಾಯ ಮಾಡಿದೆ ಎಂದು ಮೋದಿ ಹೇಳಿದರು.
ಡ್ರೋನ್ ತಂತ್ರಜ್ಞಾನವು ಹೇಗೆ ದೊಡ್ಡ ಕ್ರಾಂತಿಗೆ ಆಧಾರವಾಗುತ್ತಿದೆ ಎಂಬುದಕ್ಕೆ ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆಯು ಉದಾಹರಣೆಯಾಗಿದೆ. ಈ ಯೋಜನೆಯಡಿ ಮೊದಲ ಬಾರಿಗೆ ಹಳ್ಳಿಗಳಲ್ಲಿನ ಪ್ರತಿಯೊಂದು ಆಸ್ತಿಯನ್ನು ಡಿಜಿಟಲ್ ಮ್ಯಾಪ್ ಮಾಡಲಾಗುತ್ತಿದೆ ಮತ್ತು ಡಿಜಿಟಲ್ ಆಸ್ತಿ ಕಾರ್ಡ್‌ಗಳನ್ನು ಜನರಿಗೆ ನೀಡಲಾಗುತ್ತಿದೆ ಎಂದು ಮೋದಿ ಹೇಳಿದರು. ಕೃಷಿ, ಕ್ರೀಡೆ, ರಕ್ಷಣೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಡ್ರೋನ್‌ಗಳ ಬಳಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ಖಾಸಗಿ ಕಂಪನಿಗಳು ಹಾಗೂ ಡ್ರೋನ್ ಸ್ಟಾರ್ಟ್‌ಅಪ್‌ಗಳನ್ನು ಒಳಗೊಂಡಂತೆ 1,600 ಕ್ಕೂ ಹೆಚ್ಚು ಪ್ರತಿನಿಧಿಗಳು ಉತ್ಸವದಲ್ಲಿ ಭಾಗಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!