ತರಕಾರಿ ಮಾರುವವರ ಬಳಿಯೂ ವಸೂಲಿಗಿಳಿದ ‘ಭಾರತ್ ಜೋಡೊ’- ಕಾಂಗ್ರೆಸ್ಸಿನ 3 ಕಾರ್ಯಕರ್ತರು ಸಸ್ಪೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶದಲ್ಲಿ ಕಳೆದುಹೋಗುತ್ತಿರುವ ವರ್ಚಸ್ಸನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್‌ ʼಭಾರತ್‌ ಜೋಡೋʼ ನಡೆಸುತ್ತಿದೆ. ಆದರೆ ಕೇರಳದಲ್ಲಿ ಯಾತ್ರೆ ಸಂದರ್ಭದಲ್ಲೇ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆಯಾಗುವಂತಹ  ಘಟನೆಯೊಂದು ನಡೆದಿದ್ದು ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ಯಾತ್ರೆಗೆ ದೇಣಿಗೆಯಾಗಿ 2,000 ರೂಪಾಯಿ ನೀಡಲು ಒಪ್ಪದ ತರಕಾರಿ ಮಾರಾಟಗಾರನಿಗೆ ಕಾಂಗ್ರೆಸ್ಸಿನ ಮೂವರು ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
ದೇಣಿಗೆ ಮೊತ್ತದ ವಿಚಾರವಾಗಿ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತರಕಾರಿ ಮಾರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಲೇ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಛೀಮಾರಿ ಹಾಕುತ್ತಿದ್ದಾರೆ. ಸದ್ಯ, ಡ್ಯಾಮೇಜ್‌ ಕಂಟ್ರೋಲ್‌ ಗೆ ಮುಂದಾಗಿರುವ ಪಕ್ಷದ ರಾಜ್ಯ ಅಧ್ಯಕ್ಷ ಸುಧಾಕರನ್, ಬೆದರಿಕೆ ಹಾಕಿದ ಮೂವರು ಕಾರ್ಯಕರ್ತರನ್ನು ಅಮಾನತುಗೊಳಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಸುಧಾಕರನ್, ಪಕ್ಷವು ʼಸ್ವಯಂಪ್ರೇರಿತವಾಗಿ ಕ್ರೌಡ್ ಫಂಡ್ ಮಾಡುತ್ತಿದೆʼ. ಯಾರನ್ನು ಬೆದರಿಸಿ ಹಣ ವಸೂಲಿ ಮಾಡುವುದು ನಮ್ಮ ನೀತಿಯಲ್ಲ, ಕಾರ್ಯಕರ್ತರ ವರ್ತನೆಯು ʼಕ್ಷಮಿಸಲಾಗದ್ದುʼ ಎಂದು ಹೇಳಿದ್ದಾರೆ.
ಕೊಲ್ಲಂನಲ್ಲಿ ಸ್ವೀಕಾರಾರ್ಹವಲ್ಲದ ಘಟನೆಯಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅವರು ನಮ್ಮ ಸಿದ್ಧಾಂತವನ್ನು ಪ್ರತಿನಿಧಿಸುವುದಿಲ್ಲ. ಮತ್ತು ಅಂತಹ ನಡವಳಿಕೆಯು ಅಕ್ಷಮ್ಯವಾಗಿದೆ. ಕಾರ್ಪೊರೇಟ್ ದೇಣಿಗೆಗಳನ್ನು ಪಡೆಯುವ ಇತರರಿಗಿಂತ ಭಿನ್ನವಾಗಿ ಪಕ್ಷವು ಸ್ವಯಂಪ್ರೇರಣೆಯಿಂದ ಸಣ್ಣ ದೇಣಿಗೆಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದ್ದಾರೆ.
ʼಇಂತಹ ಆಚರಣೆಗಳನ್ನು ಪಕ್ಷ ಸಹಿಸುವುದಿಲ್ಲʼ ಎಂದು ಕೊಲ್ಲಂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ (ಡಿಸಿಸಿ) ಪಿ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ. ʼಮೂವರು ಇಲ್ಲಿನ ಮಂಡಲಂ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು. ಅವರ ಕೃತ್ಯ ಪಕ್ಷ ಮತ್ತು ನಾಯಕತ್ವಕ್ಕೆ ಮುಜುಗರ ತಂದಿದ್ದರಿಂದ ಎಐಸಿಸಿ ಮತ್ತು ಕೆಪಿಸಿಸಿ ಒಪ್ಪಿಗೆ ಮೇರೆಗೆ ಕ್ಷಿಪ್ರವಾಗಿ ಕಾರ್ಯ ನಿರ್ವಹಿಸಿ ಅವರನ್ನು ಕೂಡಲೇ ಅಮಾನತುಗೊಳಿಸಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 10 ರಂದು ಕೇರಳದಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ಅಕ್ಟೋಬರ್ 1 ರಂದು ಕರ್ನಾಟಕವನ್ನು ಪ್ರವೇಶಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!