ಭಾರತದ ಕುರಿತಾಗಿ ‘ಪಕ್ಷಪಾತದ’ ವರದಿ: ಅಮೆರಿಕದ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಅಮೆರಿಕದ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಭಾರತದ ಕುರಿತಾಗಿ ಪ್ರಕಟವಾಗುತ್ತಿರುವ ‘ಪಕ್ಷಪಾತದ’ ವರದಿಗಾರಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ನಮಗೆ ತಿಳಿದಿರುವ ಕೆಲವು ಪತ್ರಿಕೆಗಳಲ್ಲಿ ಪಕ್ಷಪಾತದ ವರದಿಗಳು ಪ್ರಕಟವಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಭಾರತಕ್ಕೆ ತನ್ನದೆ ಆದರ್ಶಗಳಿವೆ, ತನ್ನದೇ ಆದ ಮಾರ್ಗವಿದೆ. ದೇಶವು ತನ್ನ ದಾರಿಯಲ್ಲಿ ಸಾಗುತ್ತದೆ. ಕೆಲವು ವಿರೋಧಿ ಗುಂಪುಗಳಿಗೆ ಭಾರತದಲ್ಲಿ ಈಗ ಕಿಮ್ಮತ್ತು ಬೆಲೆ ಸಿಗುತ್ತಿಲ್ಲ. ಅಂತಹ ಗುಂಪುಗಳ ದೇಶದಿಂದ ಹೊರಗೆ ಭಾರತದ ಕುರಿತಾಗಿ ತಪ್ಪುಕಲ್ಪನೆಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ.
ʼವಿದೇಶದ ಜನರಿಗೆ ಮತ್ತೊಂದು ರಾಷ್ಟ್ರದ ಆಂತರಿಕ ಸೂಕ್ಷ್ಮ ಸಂಗತಿಗಳು ಮತ್ತು ವಿಚಾರಗಳಲ್ಲಿರುವ ಸಂಕೀರ್ಣತೆಗಳ ಬಗ್ಗೆ ಅರಿವಿರುವುದಿಲ್ಲ. ಅವರು ಮಾಧ್ಯಮಗಳು ಬಿಂಬಿಸಿದ್ದನ್ನು ನಂಬುತ್ತಾರೆ. ಜನರು ಅಭಿಪ್ರಾಯಗಳು ಮತ್ತು ಗ್ರಹಿಕೆಗಳು ಮಾಧ್ಯಮಗಳ ವರದಿಗಾರಿಕೆ ಮೇಲೆ ರೂಪುಗೊಳ್ಳುತ್ತವೆ. ಮಾಧ್ಯಮಗಳು ಭಾರತದ ಕುರಿತಾಗಿ ಪಕ್ಷಪಾತಿಯಾಗಿ ವ್ಯಾಖ್ಯಾನಿಸುವುದನ್ನು ತ್ಯಜಿಸಬೇಕು. ಭಾರತೀಯರು ಹಾಗೂ ಅಮೆರಿಕನ್ನರ ಸಮುದಾಯದ ಸೌಹಾರ್ದತೆ ಬಹಳ ಮುಖ್ಯ ಎಂದು ನಾವು ಭಾವಿಸುತ್ತೇವೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ವರದಿಗಳಲ್ಲಿ ನೈಜತೆಯನ್ನು ನಾವು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಅಮೆರಿಕದಲ್ಲಿ ಕಾಶ್ಮೀರ ಸಮಸ್ಯೆಯನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ಭಯೋತ್ಪಾದಕ ಘಟನೆಗಳಿಂದ ಪ್ರಾಣ ಕಳೆದುಕೊಳ್ಳುವವರು ಅಮಾಯಕರು. ಇಲ್ಲಿ ಯಾವ ಧರ್ಮದವರು ಸಾವನ್ನಪ್ಪಿದರು, ಯಾವ ನಂಬಿಕೆಯನ್ನು ಉಳ್ಳವರು ಕೊಂದರು ಎಂಬುದನ್ನು ನೋಡುತ್ತಾ ಕೂರಲಾಗುವುದಿಲ್ಲ. ನಮ್ಮ ನಾಗರೀಕರು ಸಾವನ್ನಪ್ಪಿದ್ದಾರೆ ಎಂದಾದರೆ ನಾವು ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ. ಅದನ್ನು ಧರ್ಮದ ಕನ್ನಡಕ ಹಾಕಿ ನೋಡಲಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
“ನೀವು 370-ಸಮಸ್ಯೆಯನ್ನು ನೋಡಿದರೆ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಬಹುಮತದಿಂದ ಬೆಂಬಲಿತವಾಗಿತ್ತು. ಬಹುಮತದಿಂದ ಅಂಗೀಕಾರವಾಯಿತು ಎಂದರೆ ಬಹುಜನರ ಅಂಗೀಕಾರವಲ್ಲವೇ?. ಆದರೆ ಈ ವಿಚಾರದಲ್ಲಿಯೂ ಸತ್ಯಗಳನ್ನು ಓರೆಯಾಗಿಸಿ, ಅನಗತ್ಯ ವಿಚಾರಗಳನ್ನು ಕೆದಕಲಾಯಿತು. ಆದು ಸರಿಯೋ ತಪ್ಪೋ ಎಂಬ ಗೊಂದಲವನ್ನು ಹುಟ್ಟುಹಾಕಲಾಯಿತು. ಆದರೆ ನಾವು ಇಂತಹ  ಚರ್ಚೆಗಳಿಂದ ದೂರವಿರುತ್ತೇವೆ. ಏಕೆಂದರೆ ನಾವು ದೇಶದ ನೀತಿ ನಿರೂಪಣೆಯ ಕುರಿತಾಗಿ ಅತ್ಯಂತ ಸ್ಪಷ್ಟ ಅಭಿಪ್ರಾಯಗಳನ್ನು ಹೊಂದಿದ್ದೇವೆ. ವಿಭಿನ್ನ ರೀತಿಯಲ್ಲಿ ಯೋಚಿಸುವ ಜನರು ಕೂಡ ಇರಬೇಕು. ಆದರೆ ತಪ್ಪು ವಿಚಾರಗಳು ಹರಡಬಾರದು ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!