ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಿ, ದೇಶದ ಪ್ರಮುಖ ಪ್ರವಾಸೋದ್ಯಮ ಹೂಡಿಕೆ ವಲಯವನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ.
‘ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದರ ಅನುಷ್ಠಾನಕ್ಕೆ 500 ಕೋಟಿ ಮೊತ್ತ ಮೀಸಲಿಡಲಾಗಿದೆ.
ಮಂಗಳೂರಿನಿಂದ ಕಾರವಾರದವರೆಗೆ ಸುಮಾರು 320 ಕಿ.ಮೀ. ಉದ್ದದ ಕರಾವಳಿ ಪ್ರದೇಶ ಹಾಗೂ ಉಡುಪಿ, ಮುರುಡೇಶ್ವರ, ಗೋಕರ್ಣ ಸೇರಿದಂತೆ ಹಲವು ಪ್ರಮುಖ ಪ್ರವಾಸಿ ಮತ್ತು ಧಾರ್ಮಿಕ ತಾಣಗಳನ್ನು ಹೊಂದಿರುವ ಕರಾವಳಿ ಭಾಗದ ಜೊತೆಗೆ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನೂ ಪ್ರವಾಸೋದ್ಯಮದ ವ್ಯಾಪ್ತಿಗೆ ತರುವ ಗುರಿಯನ್ನು ನೀತಿ ಹೊಂದಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ ಮತ್ತು ಮೂಲಸೌಕರ್ಯ ಸ್ಥಾನಮಾನ ನೀಡುವ ಪ್ರಸ್ತಾವನೆ ನೀತಿಯಲ್ಲಿದೆ. ಖಾಸಗಿ ಹೂಡಿಕೆಯನ್ನು ಆಕರ್ಷಿಸುವುದರ ಜೊತೆಗೆ ಅನುಮತಿ ಪಡೆಯುವ ಪ್ರಕ್ರಿಯೆಗಳನ್ನು ಸರಳಗೊಳಿಸುವ ಕ್ರಮಗಳಿಗೂ ಆದ್ಯತೆ ನೀಡಲಾಗಿದೆ.
ಶುರುವಾಗಲಿದೆ ‘ಟೂರಿಸಂ ಇನ್ವೆಸ್ಟ್‌ಮೆಂಟ್ ಫೆಸಿಲಿಟೇಷನ್ ಸೆಲ್’
ಹೂಡಿಕೆದಾರರು ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡುವ ಅಗತ್ಯ ಕಡಿಮೆ ಮಾಡಲು ‘ಟೂರಿಸಂ ಇನ್ವೆಸ್ಟ್‌ಮೆಂಟ್ ಫೆಸಿಲಿಟೇಷನ್ ಸೆಲ್’ ಹಾಗೂ ಸಿಂಗಲ್ ವಿಂಡೋ ವ್ಯವಸ್ಥೆ ರೂಪಿಸಲಾಗುತ್ತಿದೆ. ಯೋಜನೆಯ ಪ್ರಸ್ತಾವನೆಯಿಂದ ಅನುಮತಿ, ಅನುಷ್ಠಾನ ಹಾಗೂ ದೂರು ಪರಿಹಾರದವರೆಗೆ ಒಂದೇ ವೇದಿಕೆಯ ಮೂಲಕ ಮಾರ್ಗದರ್ಶನ ಮತ್ತು ಇಲಾಖೆಗಳ ನಡುವಿನ ಸಮನ್ವಯ ಕಲ್ಪಿಸುವ ಉದ್ದೇಶ ಇದಾಗಿದೆ.
ಇದನ್ನೂ ಓದಿ:
ಆಸ್ತಿ ತೆರಿಗೆ, ಭೂಮಿ ವಿಚಾರದಲ್ಲೂ ಹಲವು ಕ್ರಮ
ಇದರ ಜತೆಗೆ ಭೂಮಿ ಪೂಲಿಂಗ್, ಭೂ ಗುತ್ತಿಗೆ ನೀತಿ, ಭೂ ಪರಿವರ್ತನೆ ಪ್ರಕ್ರಿಯೆ ಸರಳೀಕರಣ, ಪರಿವರ್ತನಾ ಶುಲ್ಕ ಮರುಪಾವತಿ, ಆಯ್ದ ಪ್ರವಾಸೋದ್ಯಮ ವಲಯಗಳಲ್ಲಿ ಆಸ್ತಿ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಎಫ್‌ಎಆರ್/ಎಫ್‌ಎಸ್‌ಐ ಸಡಿಲಿಕೆ, ಟ್ರಾನ್ಸ್‌ಫರಬಲ್ ಡೆವಲಪ್‌ಮೆಂಟ್ ರೈಟ್ಸ್, ಸಾರ್ವಜನಿಕ ಮೂಲಸೌಕರ್ಯದಲ್ಲಿ ಖಾಸಗಿ ಸಹಭಾಗಿತ್ವ ಮತ್ತು ವೈಯಬಿಲಿಟಿ ಗ್ಯಾಪ್ ಫಂಡಿಂಗ್‌ಗೂ ಅವಕಾಶ ಕಲ್ಪಿಸುವ ಉದ್ದೇಶವಿದೆ.
ವೈದ್ಯಕೀಯ ಮತ್ತು ಶಿಕ್ಷಣ ಪ್ರವಾಸೋದ್ಯಮಕ್ಕೂ ಉತ್ತೇಜನ
ವೈದ್ಯಕೀಯ ಪ್ರವಾಸೋದ್ಯಮ ಮತ್ತು ಶಿಕ್ಷಣ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗುತ್ತಿದ್ದು, ಅರ್ಹ ಯೋಜನೆಗಳಿಗೆ ಬಡ್ಡಿ ಸಹಾಯಧನ ಹಾಗೂ ಹೆಚ್ಚುವರಿ ಬಂಡವಾಳ ಹೂಡಿಕೆ ಸಹಾಯಧನ ನೀಡುವ ಅವಕಾಶವಿದೆ. ಸರ್ಕಾರದ 500 ಕೋಟಿ ಆರಂಭಿಕ ಹೂಡಿಕೆಯೊಂದಿಗೆ ಕೇಂದ್ರ ಮತ್ತು ರಾಜ್ಯ ಯೋಜನೆಗಳು, CSR ಹಾಗೂ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಮೂಲಕ ಮತ್ತಷ್ಟು ಬಂಡವಾಳ ಸೆಳೆಯಲು ಉದ್ದೇಶಿಸಲಾಗಿದೆ.
ಒಟ್ಟಿನಲ್ಲಿ, ಹೊಸ ಪ್ರವಾಸೋದ್ಯಮ ನೀತಿಯ ಮೂಲಕ ಕರಾವಳಿ ಮತ್ತು ಮಲೆನಾಡಿನ ನೈಸರ್ಗಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳನ್ನು ಹೂಡಿಕೆ ಅವಕಾಶಗಳೊಂದಿಗೆ ಜೋಡಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಅನುಮತಿ ಪ್ರಕ್ರಿಯೆ ಸರಳಗೊಂಡು ಖಾಸಗಿ ಹೂಡಿಕೆ ಹೆಚ್ಚಾದರೆ, ಈ ಭಾಗದ ಪ್ರವಾಸೋದ್ಯಮದ ಜೊತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.



