ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಕ್ತ ಐಪಿಎಲ್ 2026 ಟೂರ್ನಿಯಲ್ಲಿ ಶಿಸ್ತು ಮತ್ತು ಭ್ರಷ್ಟಾಚಾರ ಮುಕ್ತ ಕ್ರಿಕೆಟ್‌ಗೆ ಆದ್ಯತೆ ನೀಡಿರುವ ಬಿಸಿಸಿಐ, ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳು ‘ಸ್ಮಾರ್ಟ್ ಸನ್‌ಗ್ಲಾಸ್’ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಬಿಸಿಸಿಐನ ಭ್ರಷ್ಟಾಚಾರ ನಿರೋಧಕ ದಳ ಈ ಕುರಿತು ಕಠಿಣ ಆದೇಶ ಹೊರಡಿಸಿದೆ.
ನಿಷೇಧಕ್ಕೆ ಕಾರಣವೇನು?
ಈ ಆಧುನಿಕ ಸ್ಮಾರ್ಟ್ ಕನ್ನಡಕಗಳು ಕೇವಲ ಕಣ್ಣಿನ ರಕ್ಷಣೆಗೆ ಸೀಮಿತವಾಗಿಲ್ಲ. ಇವುಗಳಲ್ಲಿ ಮೊಬೈಲ್ ಡೇಟಾ, ವೈ-ಫೈ, ಆಡಿಯೋ-ವೀಡಿಯೋ ರೆಕಾರ್ಡಿಂಗ್, ಲೈವ್ ಸ್ಟ್ರೀಮಿಂಗ್ ಮತ್ತು ವೀಡಿಯೋ ಕಾಲಿಂಗ್ ಮಾಡುವ ಅತ್ಯಾಧುನಿಕ ತಂತ್ರಜ್ಞಾನವಿದೆ. ನಿಯಮಾವಳಿಗಳ ಪ್ರಕಾರ ಇವುಗಳನ್ನು ‘ಸಂವಹನ ಸಾಧನ’ ಎಂದು ಪರಿಗಣಿಸಲಾಗಿದ್ದು, ಆಟಗಾರರು ಮತ್ತು ಅಧಿಕಾರಿಗಳು ಇರುವ ನಿಗದಿತ ಪ್ರದೇಶದಲ್ಲಿ ಇವುಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ
ಪಂದ್ಯದ ದಿನದಂದು ಆಟಗಾರರು ಮತ್ತು ಪೋಷಕ ಸಿಬ್ಬಂದಿ ಪಿಎಂಓಎ ವ್ಯಾಪ್ತಿಗೆ ಪ್ರವೇಶಿಸುವಾಗ ಮೊಬೈಲ್ ಫೋನ್, ಸ್ಮಾರ್ಟ್ ವಾಚ್‌ಗಳ ಜೊತೆಗೆ ಈ ಸ್ಮಾರ್ಟ್ ಸನ್‌ಗ್ಲಾಸ್‌ಗಳನ್ನೂ ಸಹ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಬೇಕು. ಹಸ್ತಾಂತರಿಸಲು ವಿಫಲವಾದರೆ ಐಪಿಎಲ್ ನಿಯಮಾವಳಿಗಳ ಅಡಿಯಲ್ಲಿ ಭಾರೀ ದಂಡ ವಿಧಿಸಲಾಗುತ್ತದೆ.
ಇದೇ ಸೀಸನ್‌ನಲ್ಲಿ ಡಗೌಟ್‌ನಲ್ಲಿ ಮೊಬೈಲ್ ಬಳಸಿ ನಿಯಮ ಉಲ್ಲಂಘಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಅಧಿಕಾರಿ ರೋಮಿ ಭಿಂದರ್‌ಗೆ ಬಿಸಿಸಿಐ ಈಗಾಗಲೇ 1 ಲಕ್ಷ ರೂ. ದಂಡ ಹಾಗೂ ಕಠಿಣ ಎಚ್ಚರಿಕೆ ನೀಡಿದೆ.
ಹನಿ-ಟ್ರಾಪ್ ಮತ್ತು ಭದ್ರತೆಗೆ ಹೊಸ ರೂಲ್ಸ್
ಐಪಿಎಲ್‌ನಲ್ಲಿ ಫಿಕ್ಸಿಂಗ್ ಹಾಗೂ ಹನಿ-ಟ್ರಾಪ್‌ನಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಬಿಸಿಸಿಐ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ:
ಅನುಮತಿಯಿಲ್ಲದೆ ತಡರಾತ್ರಿ ಆಟಗಾರರು ಹೊರಹೋಗುವುದನ್ನು ನಿಷೇಧಿಸಲಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಆಟಗಾರರ ಹೋಟೆಲ್ ರೂಮ್‌ಗಳಿಗೆ ಹೊರಗಿನ ಅತಿಥಿಗಳು ಭೇಟಿ ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.



