October 24, 2026
Saturday, October 24, 2026
spot_img

ಟೀಮ್ ಇಂಡಿಯಾಗೆ ಬಿಗ್ ಶಾಕ್: 2ನೇ ಪಂದ್ಯ ಮಾತ್ರವಲ್ಲ, 3ನೇ T20ಯಿಂದಲೂ ಕಿಶನ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ರೋಚಕ T20 ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡನೇ ಪಂದ್ಯದ ಜೊತೆಗೆ ಮೂರನೇ T20 ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಅವರು ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಾಲ್ಕನೇ ಕ್ರಮಾಂಕದ ಬದಲು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿಶನ್, ಕೇವಲ 3 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು.

ಎರಡನೇ T20 ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐ ಇಶಾನ್ ಕಿಶನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿತ್ತು. “ಇಶಾನ್ ಕಿಶನ್ ಅವರ ಬಲಗಾಲಿನಲ್ಲಿ ತೀವ್ರ ಸ್ನಾಯು ಸೆಳೆತ ಉಂಟಾಗಿದೆ. ಪ್ರಸ್ತುತ ಅವರು ಬಿಸಿಸಿಐ ವೈದ್ಯಕೀಯ ತಂಡದ ತೀವ್ರ ನಿಗಾದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಎರಡನೇ ಪಂದ್ಯಕ್ಕೆ ಲಭ್ಯವಿರುವುದಿಲ್ಲ” ಎಂದು ಸ್ಪಷ್ಟಪಡಿಸಿತ್ತು.

ಮೊದಲ ಹಾಗೂ ಎರಡನೇ ಪಂದ್ಯಗಳ ನಡುವೆ ವಿಶ್ರಾಂತಿ ದೊರೆತರೆ, ಮೂರನೇ ಪಂದ್ಯದ ವೇಳೆಗೆ ಕಿಶನ್ ಚೇತರಿಸಿಕೊಳ್ಳಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ವರದಿಗಳ ಪ್ರಕಾರ ಕಿಶನ್ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳಲು ಇನ್ನು ಹೆಚ್ಚಿನ ಕಾಲಾವಕಾಶ ಬೇಕಾಗಿದೆ. ಹೀಗಾಗಿ ಅವರನ್ನು ಮೂರನೇ T20 ಪಂದ್ಯದಿಂದಲೂ ಹೊರಗಿಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲವಾದರೂ, ಎರಡನೇ ಪಂದ್ಯ ಮುಗಿದ ತಕ್ಷಣ ಅಥವಾ ಮೂರನೇ ಪಂದ್ಯಕ್ಕೂ ಮುನ್ನ ಸ್ಪಷ್ಟ ಮಾಹಿತಿ ನೀಡುವ ಸಾಧ್ಯತೆಯಿದೆ. ಕಿಶನ್ ಅವರ ಹೊರಗುಳಿಯುವಿಕೆಯಿಂದಾಗಿ ಮ್ಯಾನೇಜ್‌ಮೆಂಟ್ ಆಡುವ ಬಳಗದಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಸವಾಲು ಎದುರಾಗಿದೆ.

Must Read