ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ನೇತೃತ್ವದ ಮೈತ್ರಿ ಸರ್ಕಾರ ಸೋಮವಾರ ಜಾತಿ ಗಣತಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಶೇಕಡಾ 63 ಪ್ರತಿಶತ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಇದ್ದಾರೆ ಎಂದು ಅಂಕಿಅಂಶಗಳು ಹೇಳಿವೆ.
ರಾಜ್ಯದಲ್ಲಿ ಅತ್ಯಂತ ಹಿಂದುಳಿದ ವರ್ಗದವರು ಶೇ. 36ರಷ್ಟಿದ್ದರೆ, ಇತರೆ ಹಿಂದುಳಿದ ವರ್ಗದವರು ಅಂದರೆ ಒಬಿಸಿಯವರು ಶೇ. 27ರಷ್ಟಿದ್ದಾರೆ. ಯಾದವರು ಗರಿಷ್ಠ ಪ್ರಮಾಣದಲ್ಲಿದ್ದು, ಇವರು ಜನಸಂಖ್ಯೆಯ ಶೇ. 14.26ರಷ್ಟಿದ್ದಾರೆ. ಬ್ರಾಹ್ಮಣರು ಶೇ. 3.65ರಷ್ಟಿದ್ದರೆ, ರಜಪೂತರು (ಠಾಕೂರ್) ಶೇ. 3.45ರಷ್ಟಿದ್ದಾರೆ. ಕಾಯಸ್ಥರ ಜನಸಂಖ್ಯೆ ಶೇ. 0.60ರಷ್ಟು ಮಂದಿ ಇದ್ದಾರೆ.
ಬಿಹಾರ ಸರ್ಕಾರದ ಪ್ರಭಾರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಅವರು ಜಾತಿ ಗಣತಿ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದರು. ಬಿಹಾರದ ಜನಸಂಖ್ಯೆ 13 ಕೋಟಿ 7 ಲಕ್ಷದ 25 ಸಾವಿರದ 310. ಇದರಲ್ಲಿ 2 ಕೋಟಿ 83 ಲಕ್ಷದ 44 ಸಾವಿರದ 160 ಕುಟುಂಬಗಳು ಬಿಹಾರದಲ್ಲಿದೆ. ಪರಿಶಿಷ್ಟ ಜಾತಿ 19.65%, ಪರಿಶಿಷ್ಟ ಪಂಗಡ 1.68% ಮತ್ತು ಸಾಮಾನ್ಯ ವರ್ಗ 15.52% ರಷ್ಟಿದೆ.
ಬಿಹಾರದ ಜನಸಂಖ್ಯೆಯು ಸುಮಾರು 82% ಹಿಂದುಗಳು ಮತ್ತು 17.7% ಮುಸ್ಲಿಮರಾಗಿದ್ದಾರೆ.
2011 ಮತ್ತು 2022 ರ ನಡುವೆ ಬಿಹಾರದಲ್ಲಿ ಹಿಂದುಗಳ ಜನಸಂಖ್ಯೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2011 ರ ಜನಗಣತಿಯ ಪ್ರಕಾರ, ಹಿಂದು ಜನಸಂಖ್ಯೆಯು 82.7% ಮತ್ತು ಮುಸ್ಲಿಂ ಜನಸಂಖ್ಯೆಯು 16.9% ಆಗಿತ್ತು.
ಅತ್ಯಂತ ಹಿಂದುಳಿದ ವರ್ಗವು ಬಿಹಾರದ ಜನಸಂಖ್ಯೆಯ 36% ರಷ್ಟಿದೆ. ಇವರಿಗೆ ಉದ್ಯೋಗದಲ್ಲಿ ಈಗಿರುವ ಮೀಸಲಾತಿಯನ್ನು ಶೇ.18ಕ್ಕೆ ನೀಡಲಾಗುತ್ತಿದೆ. 27% ಒಬಿಸಿಗಳಿಗೆ 12% ಮೀಸಲಾತಿ ನೀಡಲಾಗುತ್ತಿದೆ. ಪ್ರಸ್ತುತ, ಬಿಹಾರದಲ್ಲಿ ಇಬಿಸಿ ಮತ್ತು ಒಬಿಸಿಗೆ 30% ಮೀಸಲಾತಿಯ ಅವಕಾಶವಿದೆ. ಇದರಲ್ಲಿ ಶೇ.18 ಇಬಿಸಿ ಹಾಗೂ ಶೇ.12 ಒಬಿಸಿ ಮೀಸಲಾತಿ ಪಡೆಯುತ್ತಿದ್ದಾರೆ. ಆದರೆ ಜಾತಿ ಆಧಾರಿತ ಲೆಕ್ಕಾಚಾರದ ಪ್ರಕಾರ ಅವರ ಸಂಖ್ಯೆ 63% ಕ್ಕೆ ಏರಿದೆ.
ಬಿಹಾರ ರಾಜ್ಯದಲ್ಲಿ ನಡೆದ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಬಿಹಾರದಿಂದ ಹೊರಗೆ ವಾಸಿಸುವವರ ಸಂಖ್ಯೆ 53 ಲಕ್ಷ 72 ಸಾವಿರದ 22. ಬಿಹಾರ ರಾಜ್ಯದಲ್ಲಿ ವಾಸಿಸುವ ಜನರ ಒಟ್ಟು ಜನಸಂಖ್ಯೆ ಶೇ. 12 ಕೋಟಿ 53 ಲಕ್ಷ 53 ಸಾವಿರದ 288 ಆಗಿದೆ. ಇದರಲ್ಲಿ ಒಟ್ಟು ಪುರುಷರ ಸಂಖ್ಯೆ 6 ಕೋಟಿ 41 ಲಕ್ಷದ 31 ಸಾವಿರದ 990. ಮಹಿಳೆಯರ ಸಂಖ್ಯೆ 6 ಕೋಟಿ 11 ಲಕ್ಷ 38 ಸಾವಿರದ 460. ಇನ್ನುಳಿದವರ ಸಂಖ್ಯೆ 82 ಸಾವಿರದ 836. ಇದೇ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಬಿಹಾರದಲ್ಲಿ 1 ಸಾವಿರ ಪುರುಷರಿಗೆ 953 ಮಂದಿ ಮಹಿಳೆಯರಿದ್ದಾರೆ.