ಉತ್ತರ ಭಾರತದಲ್ಲಿ ರಣಭೀಕರ ಮಳೆ: ಬಿಹಾರದಲ್ಲಿ 33 ಸಾವು, ಅಸ್ಸಾಂ ಪ್ರವಾಹದಲ್ಲಿ ಸಿಲುಕಿದ 7 ಲಕ್ಷ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಿರುಬೇಸಿಗೆಯಿಂದ ತತ್ತರಿಸಿದ್ದ ಉತ್ತರ ಭಾರತವೀಗ ರಣಭೀಕರ ಮಳೆಯ ಅಬ್ಬರಕ್ಕೆ ನಲುಗುತ್ತಿದೆ. ನಿರಂತರ ಮಳೆ ಮತ್ತು ಭೂಕುಸಿತ, ಪ್ರವಾಹಗಳಿಂದಾಗಿ ಬಿಹಾರ, ಅಸ್ಸಾಂನಲ್ಲಿ ಅಪಾರ ಹಾನಿ ಎದುರಾಗಿದೆ. ಬಿಹಾರದಲ್ಲಿ ಸಿಡಿಲು, ಗುಡುಗು ಸಹಿತ ಸುರಿಯುತ್ತಿರುವ ಮಳೆಯಿಂದಾಗಿ 33 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಅಸ್ಸಾಂನಲ್ಲಿ ಪ್ರವಾಹ ಮತ್ತು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 14 ಕ್ಕೆ ಏರಿದೆ ಮತ್ತು ರಾಜ್ಯದ 29 ಜಿಲ್ಲೆಗಳಲ್ಲಿ ಸುಮಾರು 7.12 ಲಕ್ಷ ಜನರು ಪ್ರವಾಹ ಬಾಧಿತರಾಗಿದ್ದಾರೆ.
“ಬಿಹಾರದ 16 ಜಿಲ್ಲೆಗಳಲ್ಲಿ ಗುಡುಗು ಮತ್ತು ಸಿಡಿಲಿಗೆ ಸಿಲುಕಿ 33 ಜನರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹ 4 ಲಕ್ಷ ಪರಿಹಾರ ನೀಡಲು ಸೂಚನೆ ನೀಡಲಾಗಿದೆ” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಟ್ವಿಟ್‌ ಮಾಡಿದ್ದು, ಜನರು ಜಾಗರೂಕರಾಗಿರಲು ಮನವಿ ಮಾಡಿಕೊಂಡಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ನಾಗಾಂವ್ ಜಿಲ್ಲೆಯಲ್ಲಿ 3.36 ಲಕ್ಷಕ್ಕೂ ಹೆಚ್ಚು ಜನರು ಹಾನಿಗೊಳಗಾಗಿದ್ದಾರೆ. ಕ್ಯಾಚಾರ್ ಜಿಲ್ಲೆಯಲ್ಲಿ 1.66 ಲಕ್ಷ, ಹೋಜೈನಲ್ಲಿ 1.11 ಲಕ್ಷ ಮತ್ತು ದರ್ರಾಂಗ್ ಜಿಲ್ಲೆಯಲ್ಲಿ 52,709 ಜನರು ಪ್ರವಾಹ ಬಾಧಿತರಾಗಿದ್ದಾರೆ.
ಕ್ಯಾಚಾರ್, ಲಖಿಂಪುರ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಪ್ರವಾಹದಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಭೂಕುಸಿತಗಳು ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಹಾಫ್ಲಾಂಗ್-ನಗರವನ್ನು ಧ್ವಂಸಗೊಳಿಸಿವೆ. ರಸ್ತೆಗಳಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ವಾಸಿಸಲು ಸಾಧ್ಯವಾಗುತ್ತಿಲ್ಲ.
ವರದಿಗಳ ಪ್ರಕಾರ, 80,036.90 ಹೆಕ್ಟೇರ್ ಬೆಳೆ ಭೂಮಿ ಮತ್ತು 2,251 ಹಳ್ಳಿಗಳು ಇನ್ನೂ ನೀರಿನಡಿ ಮುಳುಗಿವೆ ಮತ್ತು 74,705 ಪ್ರವಾಹ ಪೀಡಿತ ಜನರನ್ನು ಜಿಲ್ಲಾಡಳಿತದಿಂದ ಸ್ಥಾಪಿಸಲಾದ 234 ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!