November 16, 2026
Monday, November 16, 2026
spot_img

ನೋವಿನಲ್ಲೂ ಬ್ಯಾಟ್ ಬೀಸಿದ ಜೂನಿಯರ್ ಸೆಹ್ವಾಗ್: ಮಗನಿಗೆ ವೀರು ಕೊಟ್ಟ ಸ್ಪೆಷಲ್ ಗಿಫ್ಟ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಜಗತ್ತಿನಲ್ಲಿ ‘ನಜಾಫ್‌ಗಢದ ನವಾಬ’ ಎಂದೇ ಖ್ಯಾತರಾಗಿ, ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ್ದ ವೀರೇಂದ್ರ ಸೆಹ್ವಾಗ್, ಇಂದು ಒಬ್ಬ ಹೆಮ್ಮೆಯ ತಂದೆಯಾಗಿ ಇಡೀ ದೇಶದ ಮನಗೆದ್ದಿದ್ದಾರೆ. 2026ರ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ, ‘ಸರಣಿ ಶ್ರೇಷ್ಠ’ ಪ್ರಶಸ್ತಿ ಮುಡಿಗೇರಿಸಿಕೊಂಡ ತಮ್ಮ ಪುತ್ರ ಆರ್ಯವೀರ್ ಸೆಹ್ವಾಗ್‌ಗೆ ವೀರು ನೀಡಿರುವ ಭಾವನಾತ್ಮಕ ಸಂದೇಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು. ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿದ್ದ ಆರ್ಯವೀರ್, ತಕ್ಷಣವೇ ತಂದೆಗೆ ವಿಡಿಯೋ ಕರೆ ಮಾಡಿ ತಮ್ಮ ಸಂತಸ ಹಂಚಿಕೊಂಡರು. ಈ ಮಧುರ ಸಂಭಾಷಣೆಯನ್ನು ಹಂಚಿಕೊಂಡಿರುವ ಸೆಹ್ವಾಗ್, “ಕೆಲವು ಕ್ಷಣಗಳು ಪ್ರಶಸ್ತಿ, ರನ್ ಮತ್ತು ಟ್ರೋಫಿಗಳಿಗಿಂತಲೂ ದೊಡ್ಡದಾಗಿರುತ್ತವೆ. ಒಬ್ಬ ತಂದೆ ತನ್ನ ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಸುಂದರ ನೆನಪುಗಳಿವು” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, “ನಿನ್ನ ಪಾದಗಳು ಯಾವಾಗಲೂ ನೆಲದ ಮೇಲೆಯೇ ಭದ್ರವಾಗಿರಲಿ, ನಿನ್ನ ಕಠಿಣ ಪರಿಶ್ರಮದಿಂದ ಆಕಾಶವನ್ನು ಮುಟ್ಟುವಂತಾಗಲಿ. ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯದಿಂದ ಇರು” ಎಂದು ಮಗನಿಗೆ ಜೀವನದ ಬಹುದೊಡ್ಡ ಪಾಠ ಹೇಳಿದ್ದಾರೆ.

ವಿಡಿಯೋ ಕರೆಯಲ್ಲಿ ಪಂದ್ಯದ ರೋಚಕ ಕ್ಷಣಗಳನ್ನು ನೆನೆದ ಆರ್ಯವೀರ್, “ಪಪ್ಪಾ, ಕೊನೆಯ ಓವರ್‌ಗಳಲ್ಲಿ ಪಂದ್ಯ ತೀವ್ರ ಕುತೂಹಲ ಕೆರಳಿಸಿದಾಗ ನನಗೆ ತುಂಬಾನೇ ನರ್ವಸ್ ಆಗಿತ್ತು. ಭಾರತ ಗೆಲ್ಲುವವರೆಗೂ ನಾನು ಮನಸ್ಸಿನಲ್ಲೇ ‘ಸೀತಾ ರಾಮ್, ಸೀತಾ ರಾಮ್’ ಎಂದು ಜಪಿಸುತ್ತಿದ್ದೆ” ಎಂದು ತಮ್ಮ ಮುಗ್ಧ ಮನದಾಳವನ್ನು ತಂದೆಯ ಮುಂದೆ ಬಿಚ್ಚಿಟ್ಟಿದ್ದಾರೆ.

ಫೈನಲ್ ಪಂದ್ಯದಲ್ಲಿ ಬಲ ಮೊಣಕೈಗೆ ಪೆಟ್ಟು ಬಿದ್ದಿದ್ದರೂ, ನೋವಿನ ನಡುವೆಯೇ 58 ರನ್ ಗಳಿಸಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಆರ್ಯವೀರ್ ಅವರ ಕೆಚ್ಚೆದೆಯ ಬ್ಯಾಟಿಂಗ್ ಕಂಡು ಎದುರಾಳಿ ಪಾಕ್ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಮೈದಾನದಲ್ಲಿದ್ದ ಸುಮಾರು 2,000 ಪಾಕಿಸ್ತಾನಿ ಅಭಿಮಾನಿಗಳು “ಸೆಹ್ವಾಗ್! ಸೆಹ್ವಾಗ್!” ಎಂದು ಕೂಗಿ ಹುರಿದುಂಬಿಸಿದ ವಿಶೇಷ ಕ್ಷಣವನ್ನೂ ಆರ್ಯವೀರ್ ತಂದೆಗೆ ತಿಳಿಸಿದ್ದಾರೆ. ತಂದೆಯ ಹಾದಿಯಲ್ಲೇ ಸಾಗುತ್ತಿರುವ ಮಗನ ಈ ಸಾಧನೆ ಮತ್ತು ಅಪ್ಪನ ಸರಳ ಕಿವಿಮಾತು ಈಗ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Must Read

Skip to toolbar