ಹೊಸ ದಿಗಂತ ವರದಿ, ಬೆಂಗಳೂರು:
ದೇಶದಲ್ಲಿ ಬಿಜೆಪಿ ಅಲೆ ನಿರ್ಮಾಣವಾಗಿ, ನರೇಂದ್ರಮೋದಿ ನಾಯಕತ್ವಕ್ಕೆ ಮತ ನೀಡಿರುವುದಕ್ಕೆ ಪಂಚ ರಾಜ್ಯ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಬಣ್ಣಿಸಿದರು.
ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವೇ ಅಧಿಕಾರ ಹಿಡಿಯಲಿದ್ದೇವೆ ಎಂದು ಅವರು ಇದೇ ವೇಳೆ ಭವಿಷ್ಯ ನುಡಿದರು.
ಈ ಹಿಂದೆ ಗೂಂಡಾರಾಜ್ ಆಗಿದ್ದ ಉತ್ತರಪ್ರದೇಶವನ್ನು ನರೇಂದ್ರಮೋದಿ ಮತ್ತು ಯೋಗಿ ಅದಿತ್ಯನಾಥ್ ಜೋಡಿ ಸಾಮಾನ್ಯ ಜನರ ರಾಜ್ಯವನ್ನಾಗಿಸಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶೃದ್ಧಾ ಕೇಂದ್ರಗಳ ಅಭಿವೃದ್ಧಿ ಕಾರ್ಯಗಳನ್ನು ಮನಗಂಡ ಮತದಾರರ ಅಭೂತಪೂರ್ವ ಬೆಂಬಲ ಬಿಂಬಿತವಾಗುತ್ತಿದೆ. ಬಿಜೆಪಿ ಸರ್ಕಾರಗಳ ಅಭಿವೃದ್ಧಿಪರ ಯೋಜನೆಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ ಎಂದು ಪ್ರಭು ಚವ್ಹಾಣ್ ಹೇಳಿದರು.
ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವಕ್ಕೆ ಜನ ಮತ ನೀಡಿ ಬೆಂಬಲಿಸಿದ್ದಾರೆ. ಜನರ ಅಭಿವೃದ್ಧಿಯೇ ಬಿಜೆಪಿ ಗುರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಅಭಿವೃದ್ಧಿ ಕಾರ್ಯ ಮೆಚ್ಚಿ ಮತ್ತೆ ದೇಶದಲ್ಲಿ ಡಬಲ್ ಎಂಜಿನ್ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿವೆ ಎಂದು ಪ್ರಭು ಚವ್ಹಾಣ್ ಅಭಿಪ್ರಾಯಿಸಿದರು.
ಹೈಕಮಾಂಡ್ ನಿರ್ದೇಶನದಂತೆ ಗೋವಾ ರಾಜ್ಯದಲ್ಲಿ 15 ದಿನ ಹಾಗೂ ಉತ್ತರ ಪ್ರದೇಶದಲ್ಲಿ ಒಂದು ವಾರ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೋಡಗಿದ್ದೆ. ನನಗೆ ಉಸ್ತುವಾರಿ ನೀಡಿದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಗೋವಾ ಕನ್ನಡಿಗರು ಮತ್ತು ಬಂಜಾರ ಸಮುದಾಯ ಬಿಜೆಪಿ ಪರವಾಗಿ ಮತ ಚಲಾಯಿಸಿ ಗೆಲ್ಲಿಸಿಕೊಟ್ಟಿದ್ದಾರೆ ಎಂದು ಪ್ರಭು ಚವ್ಹಾಣ್ ಇದೇ ವೇಳೆ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಗೋವಾ ಮತ್ತು ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ಸಮಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದ ಜನರೊಂದಿಗೆ ನಾನು ಸ್ಥಳೀಯವಾಗಿ ಸಭೆಗಳನ್ನು ನಡೆಸಿ ಅರಿವು ಮೂಡಿಸಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದಕ್ಕೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟ ಜನರಿಗೆ ಪ್ರಭು ಚವ್ಹಾಣ್ ಧನ್ಯವಾದಗಳನ್ನು ಸಲ್ಲಿಸಿದರು.