Wednesday, February 1, 2023

Latest Posts

ಕೊಡಗಿನ ವಿವಿಧೆಡೆ ಬಿಜೆಪಿ ಬೂತ್ ವಿಜಯ ಅಭಿಯಾನ: ಸಚಿವರು-ಶಾಸಕರು ಭಾಗಿ

ಹೊಸದಿಗಂತ ವರದಿ ಕೊಡಗು:

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರದ ಗದ್ದುಗೆ ಏರಲು ಕಾರ್ಯಕರ್ತರು ತಳಮಟ್ಟದಿಂದಲೇ ಶ್ರಮಿಸಿ ಪಕ್ಷದ ಸಾಧನೆಗಳನ್ನು ಪ್ರತಿಯೊಬ್ಬ ಮತದಾರನಿಗೂ ಮನವರಿಕೆ ಮಾಡಿಕೊಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಕರ್ನಾಟಕ ರಾಜ್ಯ ಬಿಜೆಪಿಯ ‘ಬೂತ್ ವಿಜಯ ಅಭಿಯಾನ’ದ ಅಂಗವಾಗಿ ನಾಪೋಕ್ಲು ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರ ಉತ್ತಮ ಆಡಳಿತ ಹಾಗೂ ಪಕ್ಷದ ತತ್ವ ಸಿದ್ಧಾಂತಗಳ ಆಧಾರದಲ್ಲಿ ಮತಯಾಚನೆ ಮಾಡಿ ಸದೃಢ ಸರ್ಕಾರವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಶಾಸಕರಾದ ಕೆ.ಜಿ.ಬೋಪಯ್ಯ, ಮಂಡೆಪಂಡ ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ರಾಜ್ಯ ಸಮಿತಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಗೆಲುವಿಗೆ ಬೇಕಾದ ಕಾರ್ಯತಂತ್ರದ ಬಗ್ಗೆ ಮಾರ್ಗದರ್ಶನ ನೀಡಿದರು.

ಕುಶಾಲನಗರ:  ಭಾರತೀಯ ಜನತಾ ಪಕ್ಷದ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ‌ಬಸವನತ್ತೂರಿನಲ್ಲಿ ಬೂತ್ ವಿಜಯ ಅಭಿಯಾನ ಸಭೆ ನಡೆಯಿತು.
ಬೂತ್ ಅಧ್ಯಕ್ಷ ಆರ್.ಕೆ.ಕೃಷ್ಣ ಅಧ್ಯಕ್ಷತೆಯಲ್ಲಿ ಶಕ್ತಿ‌ ಕೇಂದ್ರದ ಪ್ರಮುಖ ಪ್ರವೀಣ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರು, ಬೂತ್ ರಚನೆ, ರಚಿಸಿರುವ ಬೂತ್ ಪರಿಶೀಲನೆ, ಪೇಜ್ ರಚನೆ, ಪೇಜ್ ಪ್ರಮುಖ‌ರ ನೇಮಕ, ವಾಟ್ಸಾಪ್ ಗ್ರೂಪ್ ರಚನೆ, ಮನೆ ಮೇಲೆ ಬಿಜೆಪಿ ಧ್ವಜಾರೋಹಣ, ಮನ್ ಕಿ‌ ಬಾತ್ ವೀಕ್ಷಣೆ, ಫಲಾನುಭವಿಗಳ‌ ಪಟ್ಟಿ ರಚನೆ, ಬಿಜೆಪಿ ಸರಕಾರದ ಸಾಧನೆಗಳ ಬಗ್ಗೆ ಕರಪತ್ರ ಪ್ರಚಾರ ಕಾರ್ಯ ಮತ್ತಿತರ ವಿಚಾರಗಳು ಸೇರಿದಂತೆ ಬೂತ್ ಸಶಕ್ತೀಕರಣದ ಬಗ್ಗೆ ಮಾಹಿತಿ ನೀಡಿದರು.

58 ಸಾವಿರ ಬೂತ್’ಗಳಲ್ಲಿ ಕಾರ್ಯಕ್ರಮ: ಸಚಿವ‌ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮಾತನಾಡಿ, ಜ.2 ಕ್ಕೆ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ‌ ದೊರೆತಿದ್ದು 12ರವರೆಗೆ ಮುಂದುವರೆಯಲಿದೆ. ರಾಜ್ಯದ 58 ಸಾವಿರ ಬೂತ್ ಗಳಲ್ಲಿ‌ ಈ‌ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ‌ ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.
ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಬಿಜೆಪಿ ಪಕ್ಷದ ಕಾರ್ಯ ಯೋಜನೆ, ಸಾಧನೆಗಳ‌ ಬಗ್ಗೆ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!