ಸುಣ್ಣದ ಕಲ್ಲು ಸಂಪನ್ಮೂಲ ಬಳಸಿ ಕೈಗಾರಿಕೆ ಸ್ಥಾಪಿಸಿ: ಸಚಿವ ಡಾ.ಮುರುಗೇಶ ನಿರಾಣಿ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಜಿಲ್ಲೆಯಲ್ಲಿ ಸುಮಾರು 51 ಲಕ್ಷ ಟನ್ ಸುಣ್ಣದ ಕಲ್ಲಿನ ಸಂಪನ್ಮೂಲ ಹೇರಳವಾಗಿದ್ದು, ಇದನ್ನು ಬಳಸಿಕೊಂಡು ಸ್ಥಳೀಯರೇ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ನೀಡಬೇಕು ಎಂದು ಬೃಹತ್ ಮತ್ತು ಮಧ್ಯಮ‌ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.

ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ(ಡಿ) ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 30 ಗುಂಟೆ ವಿಸ್ತೀರ್ಣದಲ್ಲಿ 2 ಕೋಟಿ ರೂ. ವೆಚ್ಚದಡಿ ನಿರ್ಮಿಸಲಾಗಿರುವ ಖನಿಜ ಭವನ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ 500 ಕೋಟಿ ರೂ. ಹೆಚ್ಚಿನ ಹೂಡಿಕೆಯ ಕೈಗಾರಿಕೆ ಸ್ಥಾಪನೆಗೆ ಹೈ ಪವರ್ ಕಮಿಟಿ ಅನುಮತಿ ನೀಡಲಾಗುತ್ತದೆ. ಅಲ್ಲಿ 100 ಉದ್ಯಮಿದಾರರಲ್ಲಿ 99 ಅನ್ಯ ರಾಜ್ಯದವರಿದ್ದು, ಒಬ್ಬರು ಮಾತ್ರ ರಾಜ್ಯದವರು ಸಿಗ್ತಾರೆ. ಇದು ಬದಲಾಗಬೇಕಿದೆ. ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಸಬ್ಸಿಡಿ ನೀಡುವುದಲ್ಲದೆ ಸಿಂಗಲ್‌ ವಿಂಡೋ ಮೂಲಕ ತ್ವರಿತ ಅನುಮತಿ ನೀಡಲಾಗುತ್ತಿದೆ. ಇದನ್ನು ಉಪಯೋಗಿಸಿಕೊಂಡು ಸ್ಥಳೀಯ ಉದ್ಯಮಿಗಳು ಕೈಗಾರಿಕೆ ಸ್ಥಾಪಿಸಲು‌ ಮುಂದಾಗಬೇಕು ಎಂದು ಕರೆ ನೀಡಿದರು.

ಜ.19ಕ್ಕೆ‌ ಪ್ರಧಾನಮಂತ್ರಿ ಕಲಬುರಗಿಗೆ;

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಶಾಸಕ ಹಾಗೂ ಕೆ.ಕೆ‌.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ ಮಾತನಾಡಿ ಡಾ.ಮುರುಗೇಶ ನಿರಾಣಿ ಅವರು ಹಿಂದೆ ಗಣಿ ಸಚಿವರಾಗಿದ್ದಾಗ ಪ್ರತಿಫಲ ಈ ಖನಿಜ ಭವನ ಇಂದು ತಲೆ ಎತ್ತಿದೆ. ನನ್ನ ಕ್ಷೇತ್ರದಲ್ಕಿ ಸ್ಲಂ ಬೋರ್ಡ್ ನಿಂದ 3 ಸಾವಿರ‌ ಮನೆ ನಿರ್ಮಿಸುತ್ತಿದ್ದು, ಕ್ರಶ್ ಉದ್ಯಮಿಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಘಟಕ ನಿಲ್ಲಿಸಿದ್ದರಿಂದ ತೊಂದರೆಯಾಗಿದೆ. ಅಧಿಕಾರಿಗಳು ಕೂಡಲೆ ಇವರ ಸಮಸ್ಯೆ ಬಗೆಹರಿಸಬೇಕು. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೂ ಸಚಿವ‌ರು ಅನುಮತಿ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಇದೇ‌ ಜ.19ಕ್ಕೆ ಪ್ರಧಾನಮಂತ್ರಿ‌ ನರೇಂದ್ರ‌ ಮೋದಿ ಅವರು ಕಲಬುರಗಿಗೆ ಆಗಮಿಸಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!