ಕೊಡಗಿನಲ್ಲಿ ರಕ್ಷಣೆಗೆ ಪೂರಕ ಅಗತ್ಯ ಕ್ರಮಕ್ಕೆ ಬಿಜೆಪಿ ಆಗ್ರಹ

ಹೊಸದಿಗಂತ ವರದಿ, ಮಡಿಕೇರಿ:

ಮಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಕೊಡಗಿನ ಕೆಲವು ಹೋಂ ಸ್ಟೇಗಳಲ್ಲಿ ತಂಗಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆಗೆ ಪೂರಕವಾಗಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲೆಯ ಹೋಂ ಸ್ಟೇ ಮಾಲಕರು ತಮ್ಮಲ್ಲಿಗೆ ಬರುವವರ ಪೂರ್ಣ ಮಾಹಿತಿಯನ್ನು ಪಡೆದುಕೊಂಡು ನಂತರ ತಂಗಲು ಅವಕಾಶ ಒದಗಿಸಬೇಕು ಎಂದರು.
ಜಿಲ್ಲೆಯ ಸಾಕಷ್ಟು ಹೋಂ ಸ್ಟೇಗಳನ್ನು ನಡೆಸುವವರು ತಮ್ಮ ಬದುಕಿಗಾಗಿ ಇದನ್ನು ಅವಲಂಬಿಸಿದ್ದಾರೆ. ಹೀಗೆಂದು ಬಂದವರಿಗೆಲ್ಲ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡದೆ, ದೇಶ ದ್ರೋಹದ ಕಾರ್ಯದಲ್ಲಿ ನಿರತರಾಗಿರುವವರ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯವಶ್ಯವಾಗಿದೆಯೆಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಬಿನ್ ದೇವಯ್ಯ, ಬಿಜೆಪಿ ಪಕ್ಷವು ಚುನಾವಣೆ ಯಾವುದೇ ಸಂದರ್ಭ ಬಂದರೂ ಎದುರಿಸಲು ಸಿದ್ಧವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುವುದರೊಂದಿಗೆ ರಾಜ್ಯದಲ್ಲಿ 150 ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆಯುವ ವಿಶ್ವಾಸವಿದೆಯೆಂದು ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.18 ರಂದು ರಾಜ್ಯ ಪ್ರಕೋಷ್ಠಗಳ ಬೃಹತ್ ಸಮಾವೇಶ ನಡೆಯಲಿದ್ದು, ಅದರಲ್ಲಿ ಜಿಲ್ಲೆಯ 200 ಮಂದಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ವಿವಿಧ ಪ್ರಕೋಷ್ಠಗಳ ಸಭೆ ನಡೆಯಲಿದ್ದು, ಅಭ್ಯರ್ಥಿಗಳನ್ನು ವರಿಷ್ಠರು ಆಯ್ಕೆ ಮಾಡಿ ಘೋಷಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಬಿ.ಬಿ.ಭಾರತೀಶ್, ಶಜಿಲ್ ಕೃಷ್ಣ, ಬಿ.ಕೆ.ಅರುಣ್ ಕುಮಾರ್, ಎಸ್.ಸಿ.ಸತೀಶ್,ಮಹೇಶ್ ಜೈನಿ ಹಾಜರಿದ್ದರು..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!