ಹೊಸದಿಗಂತ ವರದಿ, ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಅಲ್ಲಿಯ ಸರ್ಕಾರದ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ವಿರೋಧಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹಳೆ ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆಯಿಂದ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ವರೆಗೂ ಕಾರ್ಯಕರ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಚೇರಿ ಎದುರಿಗೆ ಪಂಜಾಬ ಸಿಎಂ ಚರಂಜಿತ್ ಸಿಂಗ್ ಚೆನ್ನಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯ ಪ್ರತಿಕೃತಿಗೆ ಬೆಂಕಿ ಹಚ್ಚಿ ದಹನಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಪ್ರಕಾಶ ಶೃಂಗೇರಿ ಮಾತನಾಡಿ, ಪಂಜಾಬನ ಕಾಂಗ್ರೆಸ್ ಸರ್ಕಾರ ಪ್ರಧಾನಿ ಮೋದಿಯವರಿಗೆ ಭದ್ರತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಪಾಕಿಸ್ತಾನದೊಂದಿಗೆ ಸಹಕರಿಸಿ ಪ್ರಧಾನಿಯವರಿಗೆ ಅವಮಾನ ಮಾಡಿದ್ದಾರೆ.ತಕ್ಷಣ ರಾಷ್ಟ್ರಪತಿ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಮಹಾನಗರ ಜಿಲ್ಲಾಧ್ಯಕ್ಷ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ಪ್ರಧಾನಿ ಮೋದಿಯವರಿಗೆ ಮಾಡಿದ ಅವಮಾನ ಇಡೀ ದೇಶಕ್ಕೆ ಅವಮಾನ ಮಾಡಿದ ಹಾಗೇ ಕಾಂಗ್ರೆಸ್ ಸರ್ಕಾರ ಸಂಚುಮಾಡಿ ಈ ಕೃತ್ಯವೇಸಗಿದೆ. ಪದೇ ಪದೆ ಕಾಂಗ್ರೆಸ್ ಸರ್ಕಾರ ಗುಂಡಾಗಿರಿ ಮತ್ತೊಂದು ಮಾಡುವ ಮೂಲಕ ಬಿಜೆಪಿಯನ್ನು ಕೆಣುಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ತಕ್ಕ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಡಿಸಿದ್ದರು.
ಕಾಂಗ್ರೆಸ್ ಕಚೇರಿ ಮುತ್ತಿಗೆ: ನಂತರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಮತ್ತು ಕಾರ್ಯಕರ್ತ ನಡುವೆ ನೂಕುನುಗ್ಗಲಾಯಿತು. ಅಷ್ಟಾದರು ಕೆಲವು ಕಾರ್ಯಕರ್ತರು ಪೊಲೀಸರ ಕಣ್ಣು ತಪ್ಪಿಸಿ ಕಚೇರಿ ಮುಂದಿರುವ ಕಾಂಗ್ರೆಸ್ ನಾಯಕರ ಪೋಸ್ಟರ್ ಗಳಿಗೆ ಸಗಣಿ ಬಳಿದರು.
ಪೊಲೀಸತ್ತ ತಿರುಗಿದ ಪ್ರತಿಭಟನೆ: ಪ್ರತಿಭಟನೆ ಮಾಡುವ ವೇಳೆ ಪೊಲೀಸರು ತಡೆಯಲು ಯತ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಮತ್ತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಅಶೋಕ ಚವ್ಹಾಣ ಅವರ ನಡುವೆ ತಳ್ಳಾಟವಾಯಿತು. ಕಾರ್ಯಕರ್ತ ಪ್ರತಿಭಟನೆ ಮಾಡುಲು ಪೊಲೀಸ್ ಅಧಿಕಾರಿಗಳು ವಿರೋಧಿಸುತ್ತಿದ್ದಾರೆ ಎಂದು ಅವರ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಪೊಲೀಸ್ ಇನ್ಸ್‌ಪೆಕ್ಟರ್ ಕ್ಷಮೆ ಕೇಳಬೇಕು. ಅವರನ್ನು ವಜಾ ಮಾಡಬೇಕು ಎಂದು ಘೋಷಣೆ ಕೂಗಿದರು.