ಹೊಸದಿಗಂತ ವರದಿ, ಕಲಬುರಗಿ:
ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಗಳು ಕಳೆದೊಂದು ವಾರದಿಂದ ಹೆಚ್ಚಾಗುತ್ತಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ ಆತಂಕ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ನೋಡಿದರೇ, ನಾವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಅಧಿಕಾರಿಗಳೊಂದಿಗೆ ಯೋಜನೆ ರೂಪಿಸುತ್ತಿರುವುದಾಗಿ ಹೇಳಿದರು.
ಸಧ್ಯಕ್ಕೆ ಕಲಬುರಗಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿದ್ದು, ಪಾಸಿಟಿವಿಟಿ ರೆಟಿಂಗ್ ಶೇಕಡಾ ಒಂದರಷ್ಟು ಮಾತ್ರ ಇದೆ, ಎಲ್ಲರೂ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆಯವುದರ ಮೂಲಕ ಮೂರನೇ ಅಲೆ ತಡೆಯುವುದಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಳೆದ ನಾಲ್ಕು ದಿನಗಳಿಂದ ಸೋಂಕಿನ ಸಂಖ್ಯೆ 28 ಕ್ಕೆ ಏರಿದೆ.ಅದಕ್ಕಾಗಿ ಕೊರೊನಾ ಸೋಂಕು ತಡೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಆದರೂ ಈಗಾಗಲೇ 47 ಖಾಸಗಿ ಆಸ್ಪತ್ರೆಯಲ್ಲಿ ಶೇಕಡಾ 50 ರಷ್ಟು ಬೆಡ್ ಮೀಸಲಿಡುವಂತೆ ಸೂಚಿಸಲಾಗಿದೆ ಅಂತ ಹೇಳಿದರು.
ಇನ್ನೂ ಕೊರೋನಾ ಚಿಕಿತ್ಸೆಗಾಗಿ ಆಕ್ಸಿಜನ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು. ಹೀಗಾಗಿ ಕೊರೊನಾ ಹೆಚ್ಚಾಗಿ ಹರಡದಂತೆ ನೋಡಿಕೊಳ್ಳಲು ಜನ ಸಹಕರಿಸಬೇಕು ಎಂದರು.
ಸಂವಾದದಲ್ಲಿ ಜಿಲ್ಲಾ ಪಂಚಾಯತ ಸಿಇಓ ಡಾ ದಿಲಿಶ್ ಸಸಿ ಉಪಸ್ಥಿತರಿದ್ದರು.